

ಶ್ರೀನಗರ: ದೇಶದಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) 59 ದಶಲಕ್ಷ ಟನ್ ಲಿಥಿಯಮ್ (Lithium) ನಿಕ್ಷೇಪ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಲಿಥಿಯಮ್ ಹಗುರವಾದ ಲೋಹವಾಗಿದ್ದು, ಇದನ್ನು ಇ.ವಿ (ವಿದ್ಯುತ್ ಚಾಲಿತ ವಾಹನ) ಬ್ಯಾಟರಿಗಳ (EV batteries) ತಯಾರಿಕೆಗೆ ಬಳಸಲಾಗುತ್ತದೆ.

ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ (GSI) ನಡೆಸಿದ ಸಂಶೋಧನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನ ಪ್ರದೇಶದಲ್ಲಿ 59 ಲಕ್ಷ ಟನ್‌ಗಳಷ್ಟು ಲಿಥಿಯಮ್ ನಿಕ್ಷೇಪವಿರುವುದು ಕಂಡುಬಂದಿದೆ. ಲಿಥಿಯಮ್ ಹಾಗೂ ಚಿನ್ನ ಸೇರಿದಂತೆ 51 ಖನಿಜ ಬ್ಲಾಕ್‌ಗಳನ್ನ ಆಯಾ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಲಾಗಿದೆ ಎಂದು ಗಣಿ ಸಚಿವಾಲಯ (Ministry Of Mines) ಗುರುವಾರ ತಿಳಿಸಿದೆ.

ಪತ್ತೆಹಚ್ಚಲಾದ 51 ಖನಿಜ ಬ್ಲಾಕ್‌ಗಳಲ್ಲಿ 5 ಬ್ಲಾಕ್‌ಗಳು ಚಿನ್ನ (Gold), ಇತರ ಬ್ಲಾಕ್‌ಗಳು ಪೊಟ್ಯಾಶ್, ಮಾಲಿಬ್ಡಿನಮ್, ಮೂಲ ಲೋಹ ಸರಕುಗಳಿಗೆ ಸಂಬಂಧಿಸಿವೆ. ಇವು ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಆಂಧ್ರಪ್ರದೇಶ, ಛತ್ತೀಸ್‌ಗಢ, ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣ ಸೇರಿ 11 ರಾಜ್ಯಗಳಲ್ಲಿ ಹರಡಿಕೊಂಡಿವೆ ಎಂದು ಸಚಿವಾಲಯ ಹೇಳಿದೆ.

ತಾಂತ್ರಿಕ ಕ್ಷೇತ್ರಕ್ಕೆ ನಿರ್ಣಾಯಕ ಖನಿಜ ಪೂರೈಕೆಯನ್ನು ಬಲಪಡಿಸಲು, ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದಿಂದ ಲಿಥಿಯಮ್ ಸೇರಿದಂತೆ ಖನಿಜಗಳನ್ನು ಪಡೆಯಲು ಸರ್ಕಾರವು ಹಲವಾರು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಗಣಿ ಸಚಿವಾಲಯ ಹೇಳಿತ್ತು. ಈ ಮಧ್ಯೆ ಜಮ್ಮು-ಕಾಶ್ಮೀರದಲ್ಲಿ ಲಿಥಿಯಮ್ ನಿಕ್ಷೇಪ ಪತ್ತೆಯಾಗಿರುವುದು ಆಶಾದಾಯಕ ಬೆಳವಣಿಗೆ ಎನಿಸಿದೆ.
ಪ್ರಸ್ತುತ ಭಾರತವು ಲಿಥಿಯಮ್, ನಿಕ್ಕಲ್ ಮತ್ತು ಕೋಬಾಲ್ಟ್‌ನಂತಹ ಅನೇಕ ಖನಿಜಗಳನ್ನು ಆಮದು ಮಾಡಿಕೊಳ್ಳುತ್ತಿದೆ. 7,897 ದಶಲಕ್ಷ ಟನ್‌ನಷ್ಟಿರುವ ಕಲ್ಲಿದ್ದಲು ಮತ್ತು ಲಿಗ್ನೈಟ್ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ವರದಿಗಳನ್ನ ಕಲ್ಲಿದ್ದಲು ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ.

ನವದೆಹಲಿಯಲ್ಲಿ ನಡೆದ 62ನೇ ಕೇಂದ್ರ ಭೂಗರ್ಭಶಾಸ್ತ್ರ ಪ್ರೋಗ್ರಾಮಿಂಗ್ ಬೋರ್ಡ್‌ನ ಸಭೆಯಲ್ಲಿ ಮಾತನಾಡಿದ ಗಣಿ ಸಚಿವಾಲಯದ ಕಾರ್ಯದರ್ಶಿ ವಿವೇಕ್ ಭಾರದ್ವಾಜ್, ಮೊಬೈಲ್ ಫೋನ್ ಆಗಿರಲಿ ಅಥವಾ ಸೋಲಾರ್ ಪ್ಯಾನಲ್ ಆಗಿರಲಿ ಎಲ್ಲದಕ್ಕೂ ಖನಿಜ ಬೇಕಾಗುತ್ತವೆ. ಸ್ವಾವಲಂಬಿಯಾಗಲು ದೇಶವು ನಿರ್ಣಾಯಕ ಖನಿಜಗಳನ್ನ ಕಂಡುಹಿಡಿಯುವುದು ಮತ್ತು ಅದನ್ನು ಸಂಸ್ಕರಿಸುವುದು ಬಹಳ ಮುಖ್ಯ. ಚಿನ್ನದ ಆಮದು ಕಡಿಮೆಯಾದರೆ ನಾವು ಸ್ವಾವಲಂಬಿ ಆಗುತ್ತೇವೆ ಎಂದು ತಿಳಿಸಿದ್ದಾರೆ.
