

Another Success To ISRO: ಇಸ್ರೋ ನಿರ್ಮಿತ ಎಸ್ಎಸ್ಎಲ್ವಿ ಡಿ2 ರಾಕೆಟ್ ಉಡಾವಣೆ ಯಶಸ್ವಿಯಾಗಿ ನಡೆದಿದೆ. ಕಳೆದ ವರ್ಷ ಉಡಾವಣೆ ವಿಫಲವಾಗಿತ್ತು. ಅಂದಿನ ಕೆಲ ದೋಷಗಳನ್ನು ಸರಿಪಡಿಸಿ ಅಭಿವೃದ್ಧಿಪಡಿಸಲಾದ ಎರಡನೇ ರಾಕೆಟ್ ಯಾವುದೇ ಸಮಸ್ಯೆ ತೋರದೇ ನಭಕ್ಕೆ ಹಾರಿದೆ.
ಚೆನ್ನೈ: ಇಸ್ರೋದಿಂದ ವಿಭಿನ್ನ ಪ್ರಯೋಗಗಳನ್ನು ಒಳಗೊಂಡಿರುವ ಮತ್ತು ನೂತನವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಎಸ್ಎಸ್ಎಲ್ವಿ ಡಿ2 ರಾಕೆಟ್ (SSLV D2 Rocket) ಆಗಸಕ್ಕೆ ಯಶಸ್ವಿಯಾಗಿ ಚಿಮ್ಮಿದೆ. ಮೊದಲ ಪ್ರಯೋಗ ವಿಫಲವಾದ ಬಳಿಕ ಇನ್ನಷ್ಟು ಉತ್ಸಾಹದಿಂದ ಸಿದ್ಧವಾಗಿರುವ ಈ ರಾಕೆಟ್ ಅನ್ನು ಆಂಧ್ರದ ತಿರುಪತಿಯ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಬೆಳಗ್ಗೆ 9:18ಕ್ಕೆ ಉಡಾವಣೆ ಮಾಡಲಾಯಿತು. ಉಡಾವಣೆ ಮಾಡುವಾಗ ಎನ್ಸಿಸಿ ಹಾಡು ಹಾಡಿದ್ದು ವಿಶೇಷ. ಎನ್ಸಿಸಿಯ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ಹಾಡು ನುಡಿಸಲಾಗಿತ್ತು.

ಇಒಎಸ್-07, ಜೇನಸ್-1 ಮತ್ತು ಆಜಾದಿಸ್ಯಾಟ್-2 ಎಂಬ ಮೂರು ಉಪಗ್ರಹಗಳನ್ನು ಹೊತ್ತು ಎಸ್ಎಸ್ಎಲ್ವಿ ನಭಕ್ಕೆ ಹಾರಿದೆ. ಭೂಮಿಯಿಂದ 450 ಕಿಮೀ ಎತ್ತರದ ಕಕ್ಷೆಯೊಂದರಲ್ಲಿ ಈ ಮೂರು ಉಪಗ್ರಹಗಳನ್ನು ಸೇರಿಸುವ ಕೆಲಸ ಈ ರಾಕೆಟ್ನದ್ದು. ಇಒಎಸ್-07 ಸೆಟಿಲೈಟ್ ಅನ್ನು ಇಸ್ರೋ ಸಂಸ್ಥೆಯೇ ತಯಾರಿಸಿದೆ. ಜೇನಸ್-1 ಸೆಟಿಲೈಟ್ ಅಮೆರಿಕದ ಅಂಟಾರಿಸ್ ಸಂಸ್ಥೆ ನಿರ್ಮಿಸಿದರೆ, ಚೆನ್ನನ ಸ್ಪೇಸ್ ಕಿಡ್ಸ್ ಸಂಸ್ಥೆಯು ಆಜಾದಿಸ್ಯಾಟ್-2 ಸೆಟಿಲೈಟನ್ನು ನಿರ್ಮಿಸಿದೆ.
ಎಸ್ಎಸ್ಎಲ್ವಿ ಎಂದರೆ ಸ್ಮಾಲ್ ಸೆಟಿಲೈಟ್ ಲಾಂಚ್ ವೆಹಿಕಲ್. ಸಣ್ಣ ಉಪಗ್ರಹ ಉಡಾವಣಾ ವಾಹನ. ಹೆಸರೇ ತಿಳಿಸುವಂತೆ ಇದು ಸಣ್ಣ ಉಪಗ್ರಹಗಳನ್ನು ಆಗಸಕ್ಕೆ ಕೊಂಡೊಯ್ಯುವ ರಾಕೆಟ್ ಆಗಿದೆ. ಇದರ ವಿಶೇಷತೆ ಇರುವುದು ಹಗುರ ಉಪಗ್ರಹಗಳನ್ನು ಹೊರುವುದು ಮಾತ್ರವಲ್ಲ, ಇದರ ತಯಾರಿಕೆ ವೆಚ್ಚ ಬಹಳ ಕಡಿಮೆ. ತಯಾರಿಕೆ ಸಮಯ ಕೂಡ ಬಹಳ ಕಡಿಮೆ. ಕೇವಲ ಐದಾರು ದಿನದಲ್ಲಿ ಇದನ್ನು ತಯಾರಿಸಬಹುದು ಎಂದು ಇಸ್ರೋ ತಜ್ಞರು ಹೇಳುತ್ತಾರೆ.
