

ಬೆಂಗಳೂರು (ಫೆ.10) : ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಸಿದ್ಧತೆ ಕಾರ್ಯ ನಡೆಸುತ್ತಿದ್ದು, ಎಲ್ಲಾ 224 ಕ್ಷೇತ್ರಗಳಿಗೂ ಚುನಾವಣಾಧಿಕಾರಿಗಳನ್ನು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಿದೆ.
ಈ ಸಂಬಂಧ ಕೇಂದ್ರ ಚುನಾವಣಾ ಆಯೋಗವು ರಾಜ್ಯ ಮುಖ್ಯಚುನಾವಣಾಧಿಕಾರಿಗೆ ಪತ್ರ ಬರೆದು ಮಾಹಿತಿ ನೀಡಿದೆ. ಪ್ರತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಚುನಾವಣಾಧಿಕಾರಿಗಳನ್ನಾಗಿ ಮತ್ತು ತಹಶೀಲ್ದಾರ್ಗಳು ಸೇರಿದಂತೆ ಇತರೆ ಅಧಿಕಾರಿಗಳನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನಿಯೋಜನೆ ಮಾಡಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸಿದ್ಧತೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಜಿಲ್ಲಾಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದು, ಅವರಿಗೆ ಪೂರಕವಾಗಿ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.

ಪ್ರತಿ ಕ್ಷೇತ್ರದ ಕುರಿತು ಸಂಬಂಧಪಟ್ಟಅಧಿಕಾರಿಗಳಿಗೆ ಮಾಹಿತಿ ಇರುವ ಹಿನ್ನೆಲೆಯಲ್ಲಿ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನೇ ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಶೀಘ್ರದಲ್ಲಿಯೇ ಅವರಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ತರಬೇತಿಯನ್ನು ಸಹ ನೀಡಲಾಗುತ್ತದೆ.
ಚುನಾವಣೆಗೆ 1.3 ಲಕ್ಷ ಸೀಸೆ ಇಂಕ್ ಸಿದ್ಧ ಮಾಡಲು ಸೂಚನೆ
ಮೈಸೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಳಿಸಲಾಗದ ಶಾಯಿ ಸಿದ್ಧಪಡಿಸಿಕೊಳ್ಳಲು ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ. ಚುನಾವಣೆಗೆ ಸಿದ್ಧತೆ ಆರಂಭವಾಗುತ್ತಿರುವಂತೆಯೇ ಮೈಸೂರಿನ ಮೈಲ್ಯಾಕ್ಗೆ ಸೂಚನೆ ಬಂದಿದೆ. ಅಳಿಸಲಾಗದ ಶಾಯಿ ಮತ್ತು ಅರಗು ತಯಾರಿಸಲು ಸೂಚನೆ ಬಂದಿದ್ದು, ಅಂದಾ ಜಿನ ಮೇಲೆ 1.30 ಲಕ್ಷ ಶಾಯಿ ಸೀಸೆಯನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಸೂಚನೆ ನೀಡಿದೆ. ಮತದಾರರ ಪಟ್ಟಿಪರಿಷ್ಕರಣೆ ನಡೆಯುತ್ತಿರುವುದರಿಂದ ಅಂತಿಮ ಪಟ್ಟಿಆಧಾರದ ಮೇಲೆ ಶಾಯಿಯ ಬೇಡಿಕೆ ತೀರ್ಮಾನವಾಗಲಿದ್ದು, ಸದ್ಯ 10 ಎಂಎಲ್ನ 1.30 ಲಕ್ಷ ಶಾಯಿ ಸೀಸೆ ಬೇಕಾಗಬಹುದು ಎಂದು ಆಯೋಗ ಅಂದಾಜಿಸಿದೆ. ಇನ್ನು ಮತಯಂತ್ರ ಮತ್ತು ಯಂತ್ರ ಗಳನ್ನು ಇರಿಸುವ ಕೊಠಡಿಗಳನ್ನು ಸೀಲ್ ಮಾಡಲು ಬೇಕಾಗುವ ಸುಮಾರು 3.90 ಲಕ್ಷ ಅರಗು ಸಿದ್ಧಪಡಿಸಿಕೊಳ್ಳಲು ಆಯೋಗ ಸೂಚಿಸಿದೆ.
