

ಬೀದರ್: ಜಿಲ್ಲೆಯ ಔರಾದ್ ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿ ನಡೆಯಬಾರದ ದುರಂತ ನಡೆದು ಹೋಗಿದೆ. ಅಂಗನವಾಡಿ (Anganavadi) ಕೇಂದ್ರದ ಸಿಬ್ಬಂದಿಯ ಮಹಾ ನಿರ್ಲಕ್ಷ್ಯಕ್ಕೆ ಅಮಾಯಕ ಪುಟ್ಟ ಕಂದ ಬಲಿಯಾಗಿದೆ.
ಹೌದು. ಅಂಗನವಾಡಿ ಕೇಂದ್ರದ ಬಳಿ 3 ವರ್ಷದ ಸ್ಫೂರ್ತಿ ಎಂಬ ಬಾಲಕಿ (Girl) ಊಟ ಮಾಡುವಾಗಲೇ ಊಟದ ತಟ್ಟೆ ಸಮೇತ ಸಂಪ್‍ಗೆ ಬಿದ್ದು ಸಾವನ್ನಪ್ಪಿದ್ದಾಳೆ. ಸಂಪ್ ಮೇಲ್ಛಾವಣಿ ಮುಚ್ಚದ ಕಾರಣ ಈ ದುರ್ಘಟನೆ ನಡೆದಿದೆ. ಅಂಗನವಾಡಿ ಸಿಬ್ಬಂದಿಯ ಮಹಾ ನಿರ್ಲಕ್ಷ್ಯವೇ ಬಾಲಕಿ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ನ್ಯಾಯ ಒದಗಿಸಬೇಕು, ಪರಿಹಾರ ನೀಡಬೇಕೆಂದು ಮಗುವಿನ ತಂದೆ ಆಗ್ರಹಿಸಿದ್ದಾರೆ.

ಎಂದಿನಂತೆ ಅಂಗನವಾಡಿಗೆ ತೆರಳಿದ ಬಾಲಕಿ ಮನೆಗೆ ಬಾರದಿದ್ದಾಗ ಪೋಷಕರು (Parents) ಅಂಗನವಾಡಿ ಕೇಂದ್ರಕ್ಕೆ ಹೋಗಿದ್ದಾರೆ. ಅಲ್ಲಿ ಕೂಡಾ ಮಗು ಇಲ್ಲದೆ ಇದ್ದಾಗ ಔರಾದ್ ಪಟ್ಟಣದ ಹಲವು ಕಡೆ ಹುಡುಕಾಡಿದ್ರು. ಆದರೂ ಮಗು ಸಿಗದೆ ಇದ್ದಾಗ ಅಂಗನವಾಡಿ ಕೇಂದ್ರದಲ್ಲಿರುವ ಆವರಣದಲ್ಲಿನ ಸಂಪ್‍ನಲ್ಲಿ ನೋಡಿದಾಗ ಬಾಲಕಿಯ ಶವ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಬಾಲಕಿ ಪೋಷಕರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಅಂಗನವಾಡಿ ಕೇಂದ್ರದ ಬಳಿ ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಅಧಿಕಾರಿಗಳ ಹಾಗೂ ಸಿಬ್ಬಂದಿ ಮಹಾ ನಿರ್ಲಕ್ಷ್ಯಕ್ಕೆ ಅಮಾಯಕ ಮಗು ಬಲಿಯಾಗಿದ್ದು, ಮಾತ್ರ ವಿಪರ್ಯಾಸದ ಸಂಗತಿಯಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಅವಘಢ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
