

ನ್ಯೂಯಾರ್ಕ್: ದಶಕಗಳಲ್ಲೇ ಕಂಡುಕೇಳರಿಯದ ಭಾರೀ ತೀವ್ರತೆಯ ಭೂಕಂಪಕ್ಕೆ ತುತ್ತಾಗಿರುವ ಟರ್ಕಿ ಮತ್ತು ಸಿರಿಯಾದಲ್ಲಿ ಕನಿಷ್ಠ 20000 ಜನರು ಸಾವನ್ನಪ್ಪಿರುವ ಆತಂಕ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಕಳವಳ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ.ಟೆಡ್ರೋಸ್ ಅಧನೋಮ್ ಘೇಬ್ರಿಯೇಸಸ್ (Dr. Tedros Adhanom Ghebreyesus), ‘ಟರ್ಕಿ ಮತ್ತು ಸಿರಿಯಾ ಭೂಕಂಪ ಭಾರೀ ಅನಾಹುತವನ್ನು ಸೃಷ್ಟಿಸಿದೆ. ಉಭಯ ದೇಶಗಳಲ್ಲಿ ಅಂದಾಜು 2.3 ಕೋಟಿ ಜನರು ಭೂಕಂಪದ ಪರಿಣಾಮಗಳಿಂದ ಬಾಧಿತರಾಗಿದ್ದಾರೆ. ಈ ಪೈಕಿ 1.4 ಕೋಟಿ ಮಕ್ಕಳು ಎಂದು ಅಂದಾಜಿಸಲಾಗಿದೆ. ಜೊತೆಗೆ ದುರ್ಘಟನೆಯಲ್ಲಿ 20000 ಜನರು ಸಾವನ್ನಪ್ಪಿರುವ ಆತಂಕವಿದೆ ಎಂದು ಹೇಳಿದ್ದಾರೆ.
ಜೊತೆಗೆ ದಕ್ಷಿಣ ಟರ್ಕಿ (Turkey)ಮತ್ತು ಉತ್ತರ ಸಿರಿಯಾ (Syria) ನಡುವಿನ 250 ಮೈಲು ಉದ್ದದ ಪ್ರದೇಶದಲ್ಲಿ ಭೂಕಂಪದಿಂದ (earthquake) ಭಾರೀ ಹಾನಿಯಾಗಿದ್ದು, ಅಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಇನ್ನಷ್ಟು ಕರಾಳ ವಿಷಯಗಳು ನಮ್ಮ ಮುಂದೆ ಬರಬಹುದು. ಅದರಲ್ಲೂ ಎರಡೂ ದೇಶಗಳಲ್ಲಿನ ಕೆಲ ಪ್ರದೇಶಗಳು ಇನ್ನೂ ಯಾರ ಸಂಪರ್ಕಕ್ಕೂ ಬಂದಿಲ್ಲ. ಇದು, ಬೇರೆಲ್ಲ ವಿಷಯಗಳಿಗಿಂತ ನಮ್ಮನ್ನು ಹೆಚ್ಚು ಆತಂಕಕ್ಕೆ ಗುರಿ ಮಾಡಿದೆ. ಇದರ ಜೊತೆಗೆ ಪಶ್ಚಾತ್ ಕಂಪನ, ಭಾರೀ ಶೀತ ವಾತಾವರಣ ಇನ್ನಷ್ಟು ಸಾವಿನ ಭೀತಿಯನ್ನು ಹುಟ್ಟು ಹಾಕಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಟರ್ಕಿಯಲ್ಲಿ ಕನಿಷ್ಠ 11000 ಕಟ್ಟಡಗಳು, 3 ವಿಮಾನ ನಿಲ್ದಾಣಗಳು (airports) ಹಾನಿಗೊಳಗಾಗಿವೆ ಎಂದು ಟರ್ಕಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜಾಗತಿಕ ನೆರವಿನ ಮಹಾಪೂರ
ಭೀಕರ ಭೂಕಂಪ ಪೀಡಿತ ಟರ್ಕಿ ಹಾಗೂ ಸಿರಿಯಾ ದೇಶಗಳಿಗೆ ಇಡೀ ವಿಶ್ವವೇ ಕಂಬನಿ ಮಿಡಿದಿದ್ದು, ವಿಶ್ವದ ಬಹುತೇಕ ದೇಶಗಳು ತಮ್ಮ ಕೈಲಾದಷ್ಟುಸಹಾಯ ಮಾಡಿವೆ. ಟರ್ಕಿ ಹಾಗೂ ಸಿರಿಯ ದೇಶಗಳಲ್ಲಿ ಭೂಕಂಪದಿಂದ ಜನರು ಆಶ್ರಯ ಕಳೆದುಕೊಂಡು, ಆಹಾರವಿಲ್ಲದೇ, ಶೀತಮಾರುತಗಳಲ್ಲಿ ನಲುಗುತ್ತಿದ್ದಾರೆ. ಹೆಚ್ಚಿನ ಜನರು ಗಾಯಗೊಂಡಿದ್ದು ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಮರಣ ಹೊಂದುತ್ತಿದ್ದಾರೆ. ಇದಕ್ಕಾಗಿ ಜಗತ್ತಿನ ಹೆಚ್ಚಿನ ದೇಶಗಳು ಹಲವು ಸಹಾಯ ಮಾಡಿದ್ದು, ಸಂತ್ರಸ್ತರ ನೆರವಿಗೆ ಬಂದಿದ್ದಾರೆ. ವಿಶೇಷವೆಂದರೆ, ವಿರೋಧಿ ದೇಶಗಳು ತಮ್ಮ ವೈಷಮ್ಯ ಬದಿಗಿಟ್ಟು ಸಹಾಯ ಮಾಡಿದೆ.

ಭೂಕಂಪ ಪೀಡಿತ ಉಭಯ ದೇಶಗಳಿಗೆ ಸಾಕಷ್ಟು ಅಗತ್ಯ ನೆರವು ದೊರೆತಿದೆ. ಅವುಗಳಲ್ಲಿ, ರಕ್ಷಣಾ ಕಾರ್ಯಪಡೆ, ವಿಶೇಷ ತರಬೇತಿ ಪಡೆದ ಶ್ವಾನದಳ, ವೈದ್ಯಕೀಯ ತಂಡ, ಔಷಧಿಗಳು, ಉಪಕರಣಗಳು, ಆಹಾರ, ಹಾಸಿಗೆ, ಶಿಬಿರ ವ್ಯವಸ್ಥೆ, ತುರ್ತು ವಾಹನ, ಭೂಗರ್ಭ ತಜ್ಞರು, ಸ್ಯಾಟಲೈಟ್ ವ್ಯವಸ್ಥೆ, ಅಪಾರ ಧನ ಸಹಾಯ ಹಾಗೂ ಇತರೆ ಸಹಾಯಗಳನ್ನು ವಿಶ್ವದ ವಿವಿಧ ದೇಶಗಳು ಮಾಡಿವೆ.
ಆಗ್ನೇಯ ಟರ್ಕಿಯಲ್ಲಿ 3 ತಿಂಗಳ ತುರ್ತು ಪರಿಸ್ಥಿತಿ
ಭೀಕರ ಭೂಕಂಪನಕ್ಕೆ ಒಳಗಾಗಿರುವ ಟರ್ಕಿಯ ಆಗ್ನೇಯ ಭಾಗಕ್ಕೆ ಮೂರು ತಿಂಗಳ ತುರ್ತು ಪರಿಸ್ಥಿತಿ ಜಾರಿ ಮಾಡಲಾಗಿದೆ. ಅಲ್ಲಿನ ರಕ್ಷಣಾ ಕಾರ್ಯಗಳು ಕ್ಷಿಪ್ರವಾಗಿ ನಡೆಯುವ ಉದ್ದೇಶದಿಂದ ಈ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ ಎಂದು ಟರ್ಕಿ ಅಧ್ಯಕ್ಷ ಎರ್ಡೋಗನ್ ತಿಳಿಸಿದ್ದಾರೆ.
7 ತಾಸು ಅವಶೇಷದಡಿ ಸಿಲುಕಿದ್ದ 5 ವರ್ಷದ ಬಾಲೆ
7 ತಾಸುಗಳ ಕಾಲ ನೆಲಸಮವಾದ ಕಟ್ಟಡದ ಅಡಿ ಸಿಲುಕಿದ್ದ 5 ವರ್ಷದ ಹೆಣ್ಣು ಮಗುವೊಂದು ಧೈರ್ಯವಾಗಿ ಅಪ್ಪಾ ನಾನು ಹುಶಾರಾಗಿದ್ದೀನಿ ಎಂದು ಹೇಳಿದ ಘಟನೆ ಟರ್ಕಿಯ ಕಹ್ರಮನ್ಮರಸ್‌ನಲ್ಲಿ ನಡೆದಿದೆ. ಅಯ್ಸೆ ಕುಬ್ರಾ ಗುನೆಸ್ ಎಂಬ ಮಗು ಹಾಗೂ ಕುಟುಂಬ ವಾಸಿಸುತ್ತಿದ್ದ 6 ಅಂತಸ್ತಿನ ಕಟ್ಟಡವು ಭೂಕಂಪದ ತೀವ್ರತೆಗೆ ನೆಲಸಮವಾಗಿತ್ತು. ಹೀಗಾಗಿ 7 ತಾಸುಗಳ ಕಾಲ ಚಲಿಸಲಾಗದೆ ಮಗು ಅವಶೇಷದಡಿ ಸಿಲುಕಿತ್ತು. ಈ ವೇಳೆ ಆಕೆಯ ತಂದೆ ಆಕೆಯ ನೋಡಿ ನೋವಿನಿಂದ ಅಳುತ್ತಿದ್ದ ವೇಳೆ, ಅಪ್ಪಾ ನಾನು ಫೈನ್ ಎಂದು ತಂದೆಗೆ ಧೈರ್ಯ ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆಕೆಯ ಕುಟುಂಬ ಸದಸ್ಯರನ್ನು ಬೇಗ ರಕ್ಷಣೆ ಮಾಡಲಾಗಿತ್ತಾದರೂ, ಆಕೆಯನ್ನು ಸುಮಾರು 7 ತಾಸು ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ.
