
ನಟ ಅಕ್ಷಯ್ ಕುಮಾರ್ (Akshay Kumar) ಅವರು ವಿವಾದಕ್ಕೆ ಸಿಲುಕಿದ್ದಾರೆ. ಅವರು ಕಾಣಿಸಿಕೊಂಡಿರುವ ಹೊಸ ಜಾಹೀರಾತಿನ ದೃಶ್ಯ ಕಂಡು ನೆಟ್ಟಿಗರು ಸಿಟ್ಟಾಗಿದ್ದಾರೆ. ವಿಮಾನಯಾನ ಸಂಸ್ಥೆಯೊಂದಕ್ಕೆ ಅಕ್ಷಯ್ ಕುಮಾರ್ ರಾಯಭಾರಿ ಆಗಿದ್ದಾರೆ. ಅದರ ಜಾಹೀರಾತಿನಲ್ಲಿ ನಟಿಸಿರುವ ಅವರು ಭಾರತದ ಭೂಪಟದ (India map) ಮೇಲೆ ಕಾಲು ಇಟ್ಟಿದ್ದಾರೆ. ಇದು ಸರಿಯಾದ ವರ್ತನೆ ಅಲ್ಲ ಎಂದು ಜನರು ಕಿಡಿಕಾರಿದ್ದಾರೆ. ಈ ಬಗ್ಗೆ ಅಕ್ಷಯ್ ಕುಮಾರ್ ಏನು ಹೇಳುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಜಾಹೀರಾತು (Akshay Kumar Ad) ವೈರಲ್ ಆಗಿದೆ. ಇದರಲ್ಲಿ ದಿಶಾ ಪಟಾಣಿ, ಮೌನಿ ರಾಯ್, ಸೋನಮ್ ಬಾಜ್ವಾ, ನೋರಾ ಫತೇಹಿ ಕೂಡ ನಟಿಸಿದ್ದಾರೆ. ಆದರೆ ಅವರು ಯಾರೂ ಕೂಡ ಭಾರತದ ಭೂಪಟದ ಮೇಲೆ ಕಾಲಿಟ್ಟಿಲ್ಲ. ಅಕ್ಷಯ್ ಕುಮಾರ್ ಮಾತ್ರ ಆ ತಪ್ಪು ಮಾಡಿದ್ದಾರೆ!
ಸ್ಟಾರ್ ನಟರು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಜಾಹೀರಾತಿನ ಕಾನ್ಸೆಪ್ಟ್ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಅದರಿಂದ ಯಾರ ಭಾವನೆಗಾದರೂ ಧಕ್ಕೆ ಉಂಟಾಗುವಂತಿದ್ದರೆ ಹೆಚ್ಚಿನ ಜಾಗರೂಕತೆ ವಹಿಸಬೇಕು. ಅದರಲ್ಲೂ ದೇಶದ ವಿಚಾರದಲ್ಲಿ ಎಷ್ಟು ಹುಷಾರಾಗಿದ್ದರೂ ಸಾಲದು. ಈ ವಿಚಾರದಲ್ಲಿ ಅಕ್ಷಯ್ ಕುಮಾರ್ ಎಡವಿದ್ದಾರೆ.
ಭಾರತದ ಭೂಪಟವನ್ನು ತುಳಿದಿರುವ ಅಕ್ಷಯ್ ಕುಮಾರ್ ಅವರ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ‘ನಮ್ಮ ದೇಶಕ್ಕೆ ಸ್ವಲ್ಪವಾದರೂ ಗೌರವ ಕೊಡಿ’ ಎಂದು ಅನೇಕರು ಕ್ಲಾಸ್ ತೆಗೆದುಕೊಂಡಿದ್ದಾರೆ. ‘ಇಂಥ ಐಡಿಯಾ ಯಾರದ್ದು? ಇದರಿಂದ ನೀವು ಏನು ಸಾಧಿಸಿದಂತಾಯಿತು? ಎಂಥ ಅಹಂಕಾರಿ ನಟ’ ಎಂಬಿತ್ಯಾದಿ ಕಮೆಂಟ್ಗಳು ಕೂಡ ಬಂದಿವೆ.
ಜಾಹೀರಾತಿನ ವಿಚಾರದಲ್ಲಿ ಅಕ್ಷಯ್ ಕುಮಾರ್ ಅವರು ಜನರ ಕೆಂಗಣ್ಣಿಗೆ ಗುರಿ ಆಗಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಅವರು ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದನ್ನು ಅಭಿಮಾನಿಗಳು ತೀವ್ರವಾಗಿ ವಿರೋಧಿಸಿದ್ದರು. ಜಾಹೀರಾತಿನಲ್ಲಿ ನಟಿಸಿದರೆ ಕೋಟ್ಯಂತರ ರೂಪಾಯಿ ಸಂಭಾವನೆ ಸಿಗುತ್ತದೆ ಎಂಬುದು ನಿಜ. ಆದರೆ ಜವಾಬ್ದಾರಿ ಕೂಡ ಅಷ್ಟೇ ಇರುತ್ತದೆ ಎಂಬುದನ್ನು ಸೆಲೆಬ್ರಿಟಿಗಳು ಮರೆಯುವಂತಿಲ್ಲ.