
ಮೂರು ಹಿಂದೂ ಮಕ್ಕಳನ್ನು ತನ್ನ ಮಕ್ಕಳಂತೆ ಬೆಳೆಸಿದ ಮುಸ್ಲಿಂ ಮಹಿಳೆಯ ಹೃದಯಸ್ಪರ್ಶಿ ಕಥೆ ಈಗ ಸಿನಿಮಾ ಆಗಿ ತೆರೆಮೇಲೆ ಬರಲು ಸಿದ್ಧವಾಗಿದೆ. ಧಾರ್ಮಿಕ ಅಡೆತಡೆಗಳನ್ನು ಮೀರಿ ಮೂರು ಹಿಂದೂ ಮಕ್ಕಳನ್ನು ಸಾಕಿದ ಈ ಮಹಿಳೆಯ ಜೀವನದ ಕಥೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಕೇರಳ ಮೂಲದ ಈ ತಾಯಿಯ ಸಾಧನೆಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಫೂರ್ತಿದಾಯಕ ಮಹಿಳೆಯ ಹೃದಯಸ್ಪರ್ಶಿ ಕಥೆಗೆ ಸಿನಿಮಾ ರೂಪ ಕೊಟ್ಟಿದ್ದಾರೆ ನಿರ್ದೇಶಕ ಸಿದ್ಧಿಕ್ ಪರವೂರ್. ಧರ್ಮವನ್ನು ಮೀರಿ 3 ಮಕ್ಕಳನ್ನು ತನ್ನ ಮಕ್ಕಳಂತೆ ಸಾಕಿದ ಆ ಮಹಾತಾಯಿಯ ಹೆಸರು ತೆನ್ನಡನ್ ಸುಬೈದಾ ಮತ್ತು ಆಕೆಯ ಪತಿ ಅಬ್ದುಲ್ ಅಜೀಜ್ ಹಾಜಿ. ಈ ಸಿನಿಮಾಗೆ ‘ಎನ್ನು ಸ್ವಂತಂ ಶ್ರೀಧರನ್’ ಎಂದು ಹೆಸರಿಡಲಾಗಿದೆ. ಇದೇ ತಿಂಗಳು ಜನವರಿ 9ರಂದು ಕೊಚ್ಚಿಯ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನಗೊಳ್ಳುತ್ತಿದೆ.
ಕೇರಳದ ಮಲಪ್ಪುರಂ ಜಿಲ್ಲೆಯ ಕಾಳಿಕಾವು ಹಳ್ಳಿಯ ಮುಸ್ಲಿಂ ದಂಪತಿ ತಮ್ಮ ಮನೆ ಕೆಲಸದ ಮೂವರು ಮಕ್ಕಳನ್ನು ದತ್ತು ಪಡೆದು ತಮ್ಮ ಮಕ್ಕಳಂತೆ ಬೆಳೆಸಿದ ಕಥೆ ಇದು. ಇದು ಪ್ರಾರಂಭವಾಗಿದ್ದು ಮನೆಕೆಲಸ ಮಾಡುತ್ತಿದ್ದ ಚಕ್ಕಿ ಮರಣಹೊಂದಿದ ದಿನದಿಂದ. ಆನಾಥವಾದ ಆ ಮೂವರು ಮಕ್ಕಳನ್ನು ನೋಡಿಕೊಳ್ಳಲು ಸುಬೈದಾ ನಿರ್ಧರಿಸಿದಳು. ಸುಬೈದಾ ಸಾಕಿದ ಮೂವರು ಮಕ್ಕಳ ಹೆಸರು ಶ್ರೀಧರನ್, ರಮಣಿ ಮತ್ತು ಲೀಲಾ. ವಿಶೇಷ ಎಂದರೆ ಆ ಮೂವರು ಮಕ್ಕಳಿಗೆ ಯಾವತ್ತೂ ಮುಸ್ಲಿಂ ಧರ್ಮವನ್ನು ಅನುಸರಿಸುವಂತೆ ಒತ್ತಾಯಿಸಲಿಲ್ಲ ಮತ್ತು ಯಾವುದೇ ಅಡೆತಡೆಯಿಲ್ಲದೆ ಎಲ್ಲಾ ಹಿಂದೂ ಆಚರಣೆಗಳನ್ನು ಆಚರಿಸಲು ಅವಕಾಶ ಮಾಡಿಕೊಟ್ಟರು.
ತಾಯಿ ಸುಬೈದಾ ನಿಧನದ ಬಗ್ಗೆ ಪುತ್ರನ ಪೋಸ್ಟ್
ಮೂರು ಮಕ್ಕಳನ್ನು ತನ್ನ ಮಕ್ಕಳಂತೆ ಸಾಕಿದ ಮಹಾತಾಯಿ ಸುಬೈದಾ ಈಗ ಜೀವಂತವಾಗಿ ಇಲ್ಲ. ತನ್ನ ಸಾಕಿದ ತಾಯಿಯ ದುರಂತ ಸಾವಿನ ಬಗ್ಗೆ ಶ್ರೀಧರನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದರು. 2019ರಲ್ಲಿ ಶ್ರೀಧರನ್ ಪೋಸ್ಟ್ ಹಂಚಿಕೊಂಡ ಬಳಿಕ ಎಲ್ಲರಿಗೂ ಸುಬೈದಾ ಬಗ್ಗೆ ಗೊತ್ತಾಯಿತು. ಬಳಿಕ ಸುಬೈದಾ ಬಗ್ಗೆ ಎಲ್ಲರಿಗೂ ತಿಳಿಯಿತು. ಆಕೆಯ ಪ್ರೀತಿ, ಕಾಳಜಿ ಬಗ್ಗೆ ತಿಳಿಯಿತು.
ಶ್ರೀಧರನ್ ಪೋಸ್ಟ್ ನಲ್ಲಿ, ‘ನನ್ನ ಉಮ್ಮಾ (ತಾಯಿಯ) ನಿಧನದ ಸುದ್ದಿಯನ್ನು ನಾನು ಹಂಚಿಕೊಂಡಾಗ, ನಿಮ್ಮಲ್ಲಿ ಕೆಲವರಿಗೆ ಸಂದೇಹವಿತ್ತು. ತಮ್ಮ ಸ್ವಂತ ಮಕ್ಕಳನ್ನು ಹೊಂದಿದ್ದರೂ ನಮ್ಮನ್ನು ಕರೆದುಕೊಂಡು ಹೋದರು. ಅವರಿಗೆ ಮೂವರು ಮಕ್ಕಳಿದ್ದರು. ಚಿಕ್ಕವಯಸ್ಸಿನಲ್ಲಿ ನಮ್ಮನ್ನು ದತ್ತು ತೆಗೆದುಕೊಂಡರೂ ನಮ್ಮನ್ನು ಅವರ ಧರ್ಮಕ್ಕೆ ಪರಿವರ್ತಿಸುವ ಪ್ರಯತ್ನ ಮಾಡಲಿಲ್ಲ. ದತ್ತು ಪಡೆದ ತಾಯಿಯೂ ಎಂದಿಗೂ ಹೊಂದಿಕೆಯಾಗುವುದಿಲ್ಲ ಎಂದು ಜನರು ಹೇಳುತ್ತಾರೆ. ಆದರೆ ಅವರು ನಮಗೆ ಎಂದಿಗೂ ದತ್ತು ತಾಯಿಯಾಗಿರಲಿಲ್ಲ, ಅವರು ನಿಜವಾಗಿಯೂ ನಮ್ಮ ತಾಯಿಯಾಗಿದ್ದರು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
ನಿರ್ದೇಶಕ ಸಿದ್ದಿಕ್ ಪ್ರತಿಕ್ರಿಯೆ
ಮುಸ್ಲಿಂ ತಾಯಿಯ ಹೃಯಸ್ಪರ್ಶಿ ಕಥೆ ಕೇಳಿದ ಬಳಿಕ ನಿರ್ದೇಶಕ ಸಿದ್ದಿಕ್ ಪರವೂರ್ ಅವರು ಹೇಗೆ ಸಿನಿಮಾ ಮಾಡಿದರು ಎನ್ನುವುದನ್ನು ವಿವರಿಸಿದ್ದಾರೆ. ಮೊದಲು ಸಮಾಜ ಸೇವಕರಿಂದ ಸುಬೈದಾ ಬಗ್ಗೆ ತಿಳಿದುಕೊಂಡಿರುವುದಾಗಿ ಹೇಳಿದ್ದಾರೆ. ಕಥೆ ಭಾವುಕರಾದ ನಿರ್ದೇಶಕ ಸಿದ್ದಿಕ್, ಸುಬೈದಾ ಕಥೆಯನ್ನು ಸಿನಿಮಾ ಮೂಲಕ ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡಿದರು. ಈ ಬಗ್ಗೆ ಮಾತನಾಡಿದ ಸಿದ್ದಿಕ್, ‘ನಾನು ಅವರ ಕಥೆಯನ್ನು ಹೆಚ್ಚು ಜನರ ಗಮನಕ್ಕೆ ತರಲು ಬಯಸುತ್ತೇನೆ. ಹೀಗೆ ಬದುಕುವವರೂ ಇದ್ದಾರೆ ಎಂದು ಅವರಿಗೆ ತಿಳಿಸಬೇಕಿದೆ. ಧರ್ಮ ಮತ್ತು ಪೂರ್ವಾಗ್ರಹಗಳ ಮೇಲೆ ಪ್ರೀತಿ ಮತ್ತು ದಯೆಯನ್ನು ಇರಿಸುವ ಜನರಿದ್ದಾರೆ’ ಎಂದು ಹೇಳಿದರು.
‘ಜನರು ಸ್ವಾಭಾವಿಕವಾಗಿ ಒಳ್ಳೆಯವರು. ಆದರೆ ಕೆಲವೊಮ್ಮೆ ನಮಗೆ ಆ ಒಳ್ಳೆಯತನವನ್ನು ನೆನಪಿಸಲು ಇಂತಹ ಕಥೆಗಳು ಬೇಕಾಗುತ್ತವೆ. ಸುಬೈದಾ ನೆನಪಿಸಿಕೊಳ್ಳಲು ಅರ್ಹ ಮಹಿಳೆ. ಆಕೆಯ ಕಥೆಯನ್ನು ಪದೇ ಪದೇ ಹೇಳಲಾಗುತ್ತದೆ. ನಿಜವಾಗಿಯೂ ಅರ್ಹವಾದ ಪಾಠಗಳನ್ನು ಜೋರಾಗಿ ಮಾತನಾಡಬೇಕು ಏಕೆಂದರೆ ಅದು ಜನರ ಮಾನವೀಯತೆಯನ್ನು ನಂಬುವಂತೆ ಮಾಡುತ್ತದೆ’ ಎಂದು ಹೇಳಿದರು.
ಈ ಸಿನಿಮಾದಲ್ಲಿ ನೃತ್ಯಗಾರ್ತಿ ನಿರ್ಮಲಾ ಕಣ್ಣನ್ ಅವರು ಸುಬೈದಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಸಿನಿಮಾಗೆ ಮೊದಲು ಕ್ಲಾಪ್ ಮಾಡಿ ಕ್ಯಾಮರಾ ಆರಂಭಿಸಿದ್ದು ಸುಬೈದಾ ಪತಿ ಅಜೀಜ್ ಹಾಜಿ. ತನ್ನ ಪತ್ನಿ ಬಗ್ಗೆ ಇಡೀ ಜಗತ್ತು ತಿಳಿದುಕೊಳ್ಳುವ ಸಮಯ ಬಂದಿದೆ ಎಂದು ತುಂಬಾ ಸಂತಸ ಪಟ್ಟಿದ್ದರು. ದುರದೃಷ್ಟವಶಾತ್ ಅಜೀಜ್ ಹಾಜಿ ಕೂಡ ನಿಧನಹೊಂದಿರು. ಕೊರೊನಾದಿಂದ ಅಜೀಜ್ ಸಾವನ್ನಪ್ಪಿದರು.