
ಮಂಗಳೂರು (ಜ.31) : ಅಕ್ರಮ ಮರಳು ದಂಧೆಕೋರರ ಬೆಂಬಲಿಸೋ ಉಳ್ಳಾಲ ಠಾಣೆಯ ಪೊಲೀಸರಿಗೆ ಖಾದರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಕ್ರಮ ಮರಳು ದಂಧೆ ವಿರುದ್ದ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಗರಂ ಆಗಿದ್ದು, ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಅಕ್ರಮ ಮರಳು ದಂಧೆ (Illegal sand trade) ವಿರುದ್ಧ ಖಾದರ್(UT Khadar) ಎದುರು ವ್ಯಕ್ತಿಯೊಬ್ಬರು ಕಣ್ಣೀರಿಟ್ಟಿದ್ದಾರೆ. ಮರಳು ದಂಧೆಯಿಂದ ಮನೆಗೂ ಹಾನಿಯಾಗ್ತಿದೆ ಅಂತ ಖಾದರ್ ಎದುರು ಕಣ್ಣೀರಿಟ್ಟು ಅಳಲು ತೋಡಿಕೊಂಡಿದ್ದಾರೆ. ಮಂಗಳೂರು ಹೊರವಲಯದ ರಾಣಿಪುರ ನಿವಾಸಿಯೊಬ್ಬರು ಕಣ್ಣೀರಿಟ್ಟಿದ್ದಾರೆ. ಈ ವೇಳೆ ಆಕ್ರೋಶಗೊಂಡ ಖಾದರ್, ತಕ್ಷಣ ಫೋನ್ ಮಾಡಿ ಉಳ್ಳಾಲ ಇನ್ಸ್ಪೆಕ್ಟರ್ ಸಂದೀಪ್ ಮತ್ತು ಎಸಿಪಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಪೊಲೀಸರು ನಾಯಿ ಥರ ಅವರ ಹಿಂದೆ ಹೋಗ್ತಾರಲ್ವಾ, ನಾಚಿಗೆ ಇಲ್ವಾ?’ ‘ರಾಣಿಪುರ ಮುಖಾಂತರವೇ ಅಕ್ರಮವಾಗಿ ಮರಳು ಹೋಗ್ತಾ ಇದೆ, ನಿಮ್ಮ ಚೆಕ್ಕಿಂಗ್ ಎಲ್ಲಾ ನಮಗೆ ಗೊತ್ತಿದೆ, ತಕ್ಷಣ ರೈಡ್ ಮಾಡಿ, ಪೊಲೀಸರನ್ನ ಮರಳಿನವರು ಕಂಟ್ರೋಲ್ ಮಾಡ್ತಿದಾರಾ? ಅವರಿಗೆ ಯಾಕೆ ಹೆದರ್ತೀರಾ?’ ಒಂದು ವಾರದಿಂದ ಊರವರು ಇಲ್ಲಿ ಬಂದು ಕೂಗ್ತಾರೆ, ನಿಮಗೆ ನಿಲ್ಲಿಸಲು ಆಗಲ್ವಾ?’ ಪೊಲೀಸರು ಸರಿ ಇದ್ರೆ ಇದೆಲ್ಲಾ ಆಗುತ್ತಾ? ನೀವೇ ಖುದ್ದು ಹೋಗಿ ನಿಲ್ಲಿಸಿ’ ಅಂತ ಎಸಿಪಿಗೆ ಸೂಚನೆ ನೀಡಿದ್ದಾರೆ.
ಮಂಗಳೂರು(Mangaluru) ಹೊರವಲಯದ ಅಂಬ್ಲಮೊಗರು, ಮುನ್ನೂರು ಭಾಗದಲ್ಲಿ ಮರಳು ದಂಧೆ ವ್ಯಾಪಕವಾಗಿದೆ. ಜೊತೆಗೆ ಉಳ್ಳಾಲ ಠಾಣಾ ವ್ಯಾಪ್ತಿಯ ಹಲವು ಭಾಗಗಳಲ್ಲಿ ದಂಧೆ ನಿರಾತಂಕವಾಗಿ ನಡೀತಾ ಇದೆ. ಉಳಿಯ ನದಿ ಪಾತ್ರಗಳಲ್ಲಿ, ನೇತ್ರಾವತಿ ನದಿಯಲ್ಲಿ ವ್ಯಾಪಕ ಮರಳು ದಂಧೆ ನಡೀತಾ ಇದ್ದು, ಉಳ್ಳಾಲ ಪೊಲೀಸರೇ ಮರಳು ದಂಧೆಗೆ ಸಾಥ್ ನೀಡ್ತಾ ಇದಾರೆ ಅನ್ನೋ ಆರೋಪವಿದೆ.
ಸರಕಾರದ ನಿಯಮದಂತೆ ಯಾವುದೇ ರೀತಿಯ ಯಾಂತ್ರೀಕೃತ ಮರಳುಗಾರಿಕೆಯನ್ನು ಮಾಡುವಂತಿಲ್ಲ. ಆದರೆ ಇಲ್ಲಿ ಜೆಸಿಬಿ, ದೋಣಿಗಳಿಗೆ ಯಂತ್ರ, ಹಾಗೂ ನದಿ ತೀರದಿಂದ ಯಾವುದೇ ಕನಿಷ್ಠ ಮಿತಿಯನ್ನು ಬಿಡದೆ ದೊಡ್ಡ ಹೊಂಡಗಳನ್ನು ಮಾಡಿ ಅಕ್ರಮವಾಗಿ ಮರಳುಗಾರಿಕೆಯನ್ನು ಮಾಡಲಾಗ್ತಿದೆ. ಈ ಪ್ರದೇಶವು ಜನ ವಾಸ್ತವ್ಯ ಹಾಗೂ ಕೃಷಿ ಮಾಡುವ ಪ್ರದೇಶವಾಗಿದ್ದು, ಸಾರ್ವಜನಿಕರು ಈ ದಾರಿಯಾಗಿ ದನಕರುಗಳನ್ನು ಮೇಯಿಸಲು ನದಿಯನ್ನು ದಾಟುವ ದಾರಿಯಾಗಿದೆ. ಈಗ ಇದೇ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆಯು ನಡೆಯುತ್ತಿರುವುದರಿಂದ ಇಲ್ಲಿನ ನಿವಾಸಿಗಳಿಗೆ ಸಮಸ್ಯೆಯಾಗಿದೆ. ದೋಣಿ ಮುಖಾಂತರವೇ ಇಲ್ಲಿನ ಪ್ರದೇಶಕ್ಕೆ ಹೋಗುವ ನದಿಯಲ್ಲಿ ಶಾಲಾ ಮಕ್ಕಳು, ಹಿರಿಯ ನಾಗರಿಕರು ಇದೇ ದಾರಿಯಾಗಿ ಪ್ರಯಾಣಿಸುತ್ತಾರೆ.
ಈ ಆಕ್ರಮ ಮರಳುಗಾರಿಕೆಯಿಂದ ನದಿ ತೀರದ ನಿವಾಸಿಗಳು ಆತಂಕದಲ್ಲಿದ್ದಾರೆ. ನೆರೆಯ ಸಮಯದಲ್ಲಿ ನದಿ ತೀರವು ಕರಗಿ ಜೊತೆಗೆ, ವಾಸ್ತವ್ಯದ ಮನೆಗಳು, ಕೃಷಿ ಭೂಮಿ ನದಿಯ ಒಡಲು ಸೇರುವ ಸಾಧ್ಯತೆ ಹೆಚ್ಚಿರುವುದರಿಂದ ಬೇಸಿಗೆ ಕಾಲದಲ್ಲಿ ಉಪ್ಪು ನೀರಿನ ಪ್ರಭಾವದಿಂದ ಕುಡಿಯುವ ನೀರಿನ ಭಾವಿಗಳಲ್ಲಿ ನೀರು ಉಪ್ಪಾಗುವ ಸಾಧ್ಯತೆಗಳೂ ಸಹ ಇರುವುದರಿಂದ ಜನತೆ ಕಂಗಾಲಾಗಿದ್ದಾರೆ.