
ಉಡುಪಿ: ಹಿಟ್ಲರ್ ಸ್ವಲ್ಪ ದಿನ ಮೆರೆದ ಆಮೇಲೆ ಏನಾಯ್ತು? ಮೋದಿ (Narendra Modi) 100 ಬಾರಿ ಬಂದರೂ ಬಿಜೆಪಿ (BJP) ಬರಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಅದರ ಅಜೆಂಡಾದ ಕ್ಲಿಯರ್ ಇದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಜನರು ಅದನ್ನು ನಂಬುವುದಿಲ್ಲ. ಹಿಟ್ಲರ್ (Hitler) ಸ್ವಲ್ಪ ದಿನ ಮೆರೆದ ಆಮೇಲೆ ಏನಾಯ್ತು? ಮುಸಲೋನಿಯ ಕಥೆ ಏನಾಯ್ತು? ಫ್ರ್ಯಾಂಕೋ ಏನಾದ? ಸ್ವಲ್ಪ ದಿನ ಮೆರೆಯುತ್ತಾರೆ. ಆ ಮೇಲೆ ಜನ ಬುದ್ಧಿ ಕಳಿಸುತ್ತಾರೆ ಎಂದರು.
ಬಿಜೆಪಿಗೆ ಅಭಿವೃದ್ಧಿ ಕೆಲಸದಲ್ಲಿ ನಂಬಿಕೆ ಇಲ್ಲ. ಅಭಿವೃದ್ಧಿ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಕಟೀಲ್ ಹೇಳಿದ್ದರು. ಅಭಿವೃದ್ಧಿ ಬಡವರ ಕಾರ್ಯಕ್ರಮದ ಬಗ್ಗೆ ಅವರಿಗೆ ಆಸಕ್ತಿ ಇಲ್ಲ. ಬಿಜೆಪಿಯಿಂದ ಕರಾವಳಿ, ಕರ್ನಾಟಕ ದೇಶ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿಯ ಮನಸ್ಸು ಮತ್ತು ಮನಸ್ಥಿತಿ ಜನಕ್ಕೆ ಅರ್ಥ ಆಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮತ್ತೆ ಪ್ರಧಾನಿ ರಾಜ್ಯಕ್ಕೆ ಪ್ರವಾಸ ಕೈಗೊಳ್ಳುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೋದಿ ದೇಶದ ಪ್ರಧಾನಿ. ಅವರು ರಾಜ್ಯಕ್ಕೆ ಬರಬಹುದು. ಆದರೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಬಂದರೆ ಅಸಾಧ್ಯ. ಕರ್ನಾಟಕಕ್ಕೆ 100 ಬಾರಿ ಬಂದರು ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ರಾಜ್ಯದ ರಾಜ್ಯದ ಜನಕ್ಕೆ ಬಿಜೆಪಿ ಮೇಲೆ ಭ್ರಮನಿರಸನವಾಗಿದೆ ಎಂದು ವ್ಯಂಗ್ಯವಾಡಿದರು.

ಡಿ ಪಾರ್ಟಿ ಎಸ್ ಪಾರ್ಟಿ ಆರ್. ಅಶೋಕ್ ಆರೋಪ ವಿಚಾರವಾಗಿ ಮಾತನಾಡಿ, ಎಸ್ ಪಾರ್ಟಿ, ಡಿ ಪಾರ್ಟಿ ಇದೆಲ್ಲಾ ಸುಮ್ಮನೆ ಹುಟ್ಟು ಹಾಕಿದ ಸುಳ್ಳಾಗಿದ್ದು, ಶಾಸಕರಿಗೆ 500 600 ಕೋಟಿ ಕೊಡೋದು ಎಂದರೆ ನಂಬಲು ಸಾಧ್ಯವಿಲ್ಲ. ಆರೋಪಗಳನ್ನು ನಂಬಲು ಸಾಧ್ಯವಿಲ್ಲ ಇದೆಲ್ಲ ಸುಳ್ಳು. ಬರಿ ಸುಳ್ಳು. ಯತ್ನಾಳ್ ಮೇಲೆ ಬಿಜೆಪಿ ಯಾಕೆ ಕ್ರಮ ಕೈಗೊಂಡಿಲ್ಲ? ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆಯೋ ಇಲ್ಲವೋ? ನಡ್ಡಾ ಕಾರ್ಯಕ್ರಮಕ್ಕೆ ಹೋಗಿಲ್ಲ ಯಾಕೆ? ಅಶೋಕ ಹೇಳಿಬಿಟ್ಟ ಕೂಡಲೇ ಗುಂಪುಗಾರಿಕೆ ಆಗಲು ಸಾಧ್ಯವೇ? ರಾಜ್ಯದಲ್ಲಿ ಕನಿಷ್ಠ 130 ಗರಿಷ್ಠ 150 ಸೀಟ್ ಗೆಲ್ಲುತ್ತೇವೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಮಿತ್ ಶಾರಿಂದ ಆಪರೇಷನ್ ಹಳೆ ಮೈಸೂರು ವಿಚಾರಕ್ಕೆ ಪ್ರತಿಕ್ರಿಯಿಸಿ, ಹೇಳ್ಬಿಟ್ಟ ತಕ್ಷಣ ಆಪರೇಷನ್ ಆಗಿಬಿಡುತ್ತಾ? ಬಾಯಲ್ಲಿ ಹೇಳಿದ್ದೆಲ್ಲ ಆಗಿ ಬಿಡಲು ಸಾಧ್ಯವೇ? ಪಶ್ಚಿಮ ಬಂಗಾಳಕ್ಕೆ ಅಮಿತ್ ಶಾ ಎಷ್ಟು ಬಾರಿ ಹೋದರು ಅಲ್ಲಿ ಏನಾಯ್ತು? ಮಮತಾ ಬ್ಯಾನರ್ಜಿಯನ್ನು ಅಧಿಕಾರಿಂದ ಕೆಳಗಿಳಿಸಲು ಸಾಧ್ಯವಾಯಿತಾ? ಕರ್ನಾಟಕಕ್ಕೆ ಬಂದರೂ ಅಮಿತ್ ಶಾಗೆ ಅದೇ ಗತಿ ಎಂದು ವ್ಯಂಗ್ಯವಾಡಿದರು.