
ಕಾಬೂಲ್: ಅಫ್ಘಾನಿಸ್ತಾನವನ್ನು (Afghanistan) ವಶಪಡಿಸಿಕೊಂಡ ನಂತರ ತಾಲಿಬಾನ್ (Taliban) ಸರ್ಕಾರ ಒಂದೆಲ್ಲಾ ಒಂದು ವಿಷಯಕ್ಕೆ ಚರ್ಚೆ ಆಗುತ್ತಿದೆ. ಇತ್ತೀಚೆಗಷ್ಟೇ ಮಹಿಳೆಯರ ಶಿಕ್ಷಣಕ್ಕೆ ನಿಷೇಧ ಹೇರಿ ಭಾರೀ ಟೀಕೆಗೆ ಒಳಗಾಗಿತ್ತು. ಇದೀಗ ಕಳ್ಳತನ ಆರೋಪದ ಮೇಲೆ ನಾಲ್ವರ ಕೈಗಳನ್ನು ಸಾರ್ವಜನಿಕವಾಗಿ ಕತ್ತರಿಸುವುದರ ಮೂಲಕ ಮತ್ತೇ ಚರ್ಚೆ ಗ್ರಾಸವಾಗಿದೆ.
ಕಂದಹರ್‌ನ ಅಹ್ಮದ್ ಶಾಹಿ ಸ್ಟೇಡಿಯಂನಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಗವರ್ನರ್ ಕಚೇರಿಯ ವಕ್ತಾರ ಹಾಜಿ ಝೈದ್ ಮಾಹಿತಿ ನೀಡಿದ್ದು, ವಿವಿಧ ಅಪರಾಧಗಳಿಗಾಗಿ ಫುಟ್ಬಾಲ್ ಕ್ರೀಡಾಂಗಣದಲ್ಲಿ ಕಳ್ಳತನದ (Theft) ಆರೋಪದ ಮೇರೆಗೆ 4 ಮಂದಿಗಳ ಕೈಯನ್ನು ಕತ್ತರಿಸಲಾಯಿತು. ಜೊತೆಗೆ 9 ಮಂದಿಯನ್ನು ಥಳಿಸಲಾಯಿತು. ಆ ಅಪರಾಧಿಗಳಿಗೆ 25-29 ಬಾರಿ ಹೊಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ವೇಳೆ ತಾಲಿಬಾನ್ ಅಧಿಕಾರಿಗಳು, ಧಾರ್ಮಿಕ ಮೌಲ್ವಿಗಳು, ಹಿರಿಯರು ಮತ್ತು ಸ್ಥಳೀಯ ಜನರು ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ 9 ಮಂದಿ ಅಪರಾಧಿಗಳು ಹುಲ್ಲಿನ ಮೇಲೆ ಕುಳಿತಿರುವುದನ್ನು ಕಾಣಬಹುದು.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ತಾಲಿಬಾನ್ ಸರ್ಕಾರವು ಮೊದಲ ಬಾರಿಗೆ ಸಾರ್ವಜನಿಕವಾಗಿ ಅಪರಾಧಿಯೊಬ್ಬನನ್ನು ಗಲ್ಲಿಗೇರಿಸಿತ್ತು.