
ನವದೆಹಲಿ: ದೆಹಲಿಯಲ್ಲಿ (Delhi) ಎರಡು ದಿನಗಳ ಕಾಲ ನಡೆದ ಬಿಜೆಪಿ (BJP) ರಾಷ್ಟ್ರೀಯ ಕಾರ್ಯಕಾರಿಣಿ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಆಡಿರುವ ಒಂದು ಮಾತು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಮುಸ್ಲಿಂ (Muslim) ಸಮುದಾಯದ ಜನರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಪ್ರಧಾನಿ ಮೋದಿ ತಮ್ಮ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದಾರೆ. ದೇಶದ ಅನೇಕ ಸಮುದಾಯಗಳು ಬಿಜೆಪಿಗೆ ಮತ ಹಾಕುವುದಿಲ್ಲ, ಆದರೆ ಬಿಜೆಪಿ ಕಾರ್ಯಕರ್ತರು ಮುಸ್ಲಿಂ ಸಮುದಾಯಕ್ಕೆ ಅಗೌರವ ತೋರದೆ, ಉತ್ತಮ ಸಮನ್ವಯತೆ ಸ್ಥಾಪಿಸಿ ಅವರೊಂದಿಗೆ ಉತ್ತಮ ನಡವಳಿಕೆಯನ್ನು ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಈ ಹಿಂದೆ ಹೈದರಾಬಾದ್ ಕಾರ್ಯಕಾರಿಣಿಯಲ್ಲಿಯೂ ಪ್ರಧಾನಿ ಇದೇ ಮಾತನ್ನು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಯಾಕೆ ಇಂತಹ ಹೇಳಿಕೆ ನೀಡಬೇಕಾಯಿತು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಮೋದಿಯವರ ಈ ಹೇಳಿಕೆಗಳ ನಂತರ ಬಿಜೆಪಿ ನಾಯಕರು ಮುಸ್ಲಿಂರ ವಿರುದ್ಧದ ದ್ವೇಷದ ಹೇಳಿಕೆಗಳು ಕಡಿಮೆಯಾಗಬಹುದೇ? ಆ ಸಮುದಾಯಕ್ಕೆ ತೆಗಳಿದರೆ ಮಾತ್ರ ಮತಗಳು ಬರುತ್ತವೆ ಎನ್ನುವ ಲೆಕ್ಕಾಚಾರದಲ್ಲಿರುವ ಮುಖಂಡರಿಂದ ಮುಸ್ಲಿಂ ಸಮಯದಾಯದ ವಿರುದ್ಧ ಮೌನ ವಹಿಸುವುದು ಸಾಧ್ಯವಾ..? ಎನ್ನುವ ಪ್ರಶ್ನೆ ಕಾಡತೊಡಗಿದೆ.
ಇತ್ತೀಚೆಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂದರ್ಶನವೊಂದರಲ್ಲಿ ಹಿಂದೂ ಸಮಾಜ ಸಾವಿರಾರು ವರ್ಷಗಳಿಂದ ಗುಲಾಮರಾಗಿದ್ದಾರೆ. ಇದರಿಂದಾಗಿ ಕೆಲವೊಮ್ಮೆ ಹಿಂದೂ ಸಮುದಾಯದ ಕಡೆಯಿಂದ ಆಕ್ರಮಣಕಾರಿ ನಡವಳಿಕೆ ಕಂಡುಬರುತ್ತದೆ ಎಂದಿದ್ದರು. ಇತಿಹಾಸದ ದೃಷ್ಟಿಯಲ್ಲಿ ಹಿಂದೂ ಸಮುದಾಯದ ಈ ಸಿಟ್ಟು ಸರಿಯಾಗಿದೆ ಎಂದು ಭಾಗವತ್ ಪರೋಕ್ಷವಾಗಿ ಬೆಂಬಲಿಸಿದರು. ಮೋಹನ್ ಭಾಗವತ್ ಅವರ ಈ ಹೇಳಿಕೆಗೆ ವ್ಯತಿರಿಕ್ತವಾಗಿ ಮುಸ್ಲಿಂ ಸಮುದಾಯದ ಪರ ಸಹಾನುಭೂತಿಯಿಂದ ಯೋಚಿಸುವಂತೆ ಪ್ರಧಾನಿ ಮೋದಿಯವರು ಕಾರ್ಯಕಾರಿಣಿಯಲ್ಲಿ ಉಪದೇಶ ನೀಡಿದ್ದಾರೆ. ಪ್ರಧಾನಿ ಮೋದಿಯವರ ಹೇಳಿಕೆ ಭಾಗವತ್ ಅವರ ಹೇಳಿಕೆಗಿಂತ ಭಿನ್ನವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ಕಾರ್ಯಕಾರಿಣಿಯಲ್ಲಿ ಪಸ್ಮಾಂಡ ಮುಸ್ಲಿಮರನ್ನು ಬಿಜೆಪಿಯೊಂದಿಗೆ ಸೇರಿಸಿಕೊಳ್ಳುವ ಬಗ್ಗೆ ಮಾತನಾಡಿದ್ದರು. ಸಕಾರಾತ್ಮಕ ಕಾರ್ಯಕ್ರಮಗಳ ಮೂಲಕ ಅವರನ್ನು ಸೆಳೆಯುವ ಬಗ್ಗೆ ಸಲಹೆ ನೀಡಿದ್ದರು. ಇದರಿಂದ ಗುಜರಾತ್ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಒಂದಷ್ಟು ಲಾಭ ಸಿಕ್ಕಿದ್ದು, ಮುಸ್ಲಿಂ ಸಮುದಾಯದ ಒಂದಷ್ಟು ಮತಗಳು ಬಿಜೆಪಿ ಖಾತೆಗೆ ಬಂದಿವೆ. ಆದರೆ ಪ್ರಧಾನಿಯವರ ಮನವಿಯ ನಂತರವೂ ಕೆಲವು ಬಿಜೆಪಿ ನಾಯಕರು ಮುಸ್ಲಿಮರು ಮತ್ತು ಅವರ ಧಾರ್ಮಿಕ ಚಿಹ್ನೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಇದು ದೇಶದಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿತ್ತು. ಈ ಕಾರಣಕ್ಕಾಗಿ ಬಿಜೆಪಿ ತನ್ನ ಇಬ್ಬರು ಹಿರಿಯ ನಾಯಕರಿಗೆ ಪಕ್ಷದಿಂದ ಗೇಟ್ ಪಾಸ್ ನೀಡಿತ್ತು.