
ಬೆಂಗಳೂರು (ಜ.14): ಪಂಚಮಸಾಲಿಗೆ 2ಎ ಮೀಸಲಾತಿಗೆ ಆಗ್ರಹಿಸಿ ಕಳೆದ 2 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ನಾವು ಸುವರ್ಣಸೌಧ ಮುತ್ತಿಗೆ ಹಾಕಲು ಮುಂದಾಗಿದ್ದೆವು. ಆದರೆ, ಸಿಎಂ ಬೊಮ್ಮಾಯಿ ಅವರು ತಮ್ಮ ತಾಯಿ ಮೇಲೆ ಆಣೆ ಮಾಡಿದ್ದರಿಂದ ಸುಮ್ಮನಾಗಿದ್ದೆವು. ಆದರೆ, ಸರ್ಕಾರ ನಮಗೆ ಮೋಸ ಮಾಡಿದ್ದರಿಂದ ಹೋರಾಟ ಮುಂದುವರೆಸುತ್ತಿದ್ದೇವೆ. ಜನವರಿ 16 ರಿಂದ ಪ್ರತಿ ದಿನ ಎರಡು ತಾಲ್ಲೂಕುಗಳಿಂದ ಜನ ಬರಲಿದ್ದಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ನಾವು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಇತ್ತೀಚೆಗೆ ಬೆಳಗಾವಿಯಲ್ಲಿ ಸುವರ್ಣ ಸೌಧ ಮುತ್ತಿಗೆ ಹಾಕಲು ಯತ್ನಿಸಿ ರಾಷ್ಟ್ರೀಯ ಹೆದ್ದಾರಿ ತಡೆ ಹಿಡಿದಿದ್ದೇವೆ. 2 ಲಕ್ಷ ಜನ ಸೇರಿ ಶಕ್ತಿ ಪ್ರದರ್ಶನ ಮಾಡಿದ್ದೇವೆ. ಪಾದಯಾತ್ರೆ ನಡೆಸಿದ್ದೇವೆ. ಇಷ್ಟಾದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿಲ್ಲ. ಹಿಂದುಳಿದ ವರ್ಗದಿಂದ ಸರ್ಕಾರ ಅಂತಿಮ ವರದಿ ಪಡೆಯಬೇಕು ಎಂದು ಒತ್ತಾಯಿಸಿದ್ದೆವು. ಆದರೆ ಸಿಎಂ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ. ಇದು ನಮ್ಮ ಅಂತಿಮ ಹೋರಾಟ. ಚುನಾವಣೆಗೆ 80 ದಿನಗಳು ಬಾಕಿ ಇದೆ, ಈಗ ಒತ್ತಾಯ ಮಾಡದಿದ್ದರೆ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದರು.
ತಾಯಿ ಮೇಲೆ ಅಣೆ ಇಟ್ಟಿದ್ದರಿಂದ ಕಾದು ನೋಡಿದ್ದೇವೆ: ಸಿಎಂ ಬಸವರಾಜ ಬೊಮ್ಮಾಯಿ ಅವರು, ತಮ್ಮ ತಾಯಿ ಮೇಲೆ ಆಣೆ ಮಾಡಿ ಮೀಸಲಾತಿ ಕೊಡುವ ಭರವಸೆ ನಿಡಿದ್ದರು. ಹೀಗಾಗಿ, ನಾವು ಹೋರಾಟ ಸ್ಥಗಿತಗೊಳಿಸಿ ಸುಮ್ಮನಾಗಿದ್ದೆವು. ಆದರೆ, ಮತ್ತೆ ನಮಗೆ ಮೋಸ ಆಗಿದೆ. ತಾಯಿ ಎಂದರೇ ದೇವರು, ಅವರ ಮೇಲೆ ಅಣೆ ಮಾಡಿದ್ರಿಂದ ನಾವು ಸುಮ್ಮನಾಗಿದ್ದೆವು. ಸುವರ್ಣಸೌಧಕ್ಕೆ ಮುತ್ತಿಗೆ ಹಾಕೋಕೆ ನಮ್ಮ ಸಮುದಾಯ ಸಿದ್ದವಾಗಿದ್ದರು. ಅಣೆ ಇಟ್ಟು ನಮಗೆ ಮೋಸ ಮಾಡಿದ್ದಾರೆ. 1.30 ಕೋಟಿ ಮಂದಿಗೆ ಮೋಸ ಮಾಡಿದ್ದಾರೆ. ನಾವು ಕೇಳಿದ್ದು 2 ಎ ಮೀಸಲಾತಿ. ನಮ್ಮ ಹೋರಾಟದಿಂದ ಇಡೀ ಲಿಂಗಾಯತ ಸಮುದಾಯವನ್ನ 2ಡಿಗೆ ಸೇರಿಸಿದರು. ಬೋಮ್ಮಾಯಿ ನಿರ್ಣಯ ನೋಡಿ ಸಂಭ್ರಮಾಚರಣೆಯೂ ಮಾಡಬೇಡಿ, ವಿರೋಧವನ್ನೂ ಮಾಡಬೇಡಿ ಅಂತ ಹೇಳಿದ್ದೆನು ಎಂದರು.
ಎರಡು ದಿನದಲ್ಲಿ ಕಾರ್ಯಕಾರಣಿ ಸಭೆ: ನಾಳೆ ಅಥವಾ ನಾಡಿದ್ದು ನಾವು ರಾಜ್ಯ ಕಾರ್ಯಕಾರಣಿ ಸಭೆ ನಡಿಸುತ್ತೇವೆ. ಈ ಸಭೆಯಲ್ಲಿ ನಮ್ಮ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ. ನಾನು ಯಾರ ಸಲಹೆಯನ್ನು ಪಡೆಯುತ್ತಿಲ್ಲ. ನಾನು ಜನರ ಸಲಹೆ ಪಡೆಯುತ್ತೇನೆ. ಸಿಎಂ ಮೇಲೆ ನಮಗೆ ವಯಕ್ತಿಕ ಸಿಟ್ಟಿಲ್ಲ. ಎರಡು ವರ್ಷಗಳ ಹೋರಾಟದ ಸಮಯದಲ್ಲಿ ಸಿಎಂ ಮೌನ ವಹಿಸಿದ್ದೇಕೆ..? ಇನ್ನು ಮುರುಗೇಶ್ ನಿರಾಣಿ ಪೂರ್ವಗ್ರಹ ಪೀಡಿತರಾಗಿ ಮಾತಾಡುತ್ತಾರೆ. ನಿರಾಣಿ, ಸಿಸಿ ಪಾಟೀಲ್ ಅವರು ಒಂದೇ ಥರ ಮಾತನಾಡುತ್ತಾರೆ. ನಮ್ಮ ಹೋರಾಟ ನಾವು ಮುಂದುವರೆಸುತ್ತೇವೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.