
ಪ್ರಧಾನಿ ಮೋದಿ ಅವರ ಹುಬ್ಬಳ್ಳಿ ಭೇಟಿಯ ವೇಳೆ ನಗರದ ಪ್ರತಿ ಪಿಯು ಕಾಲೇಜುಗಳ ಪ್ರಾಂಶುಪಾಲರು ಕನಿಷ್ಠ 100 ವಿದ್ಯಾರ್ಥಿಗಳನ್ನು ಕರೆತರುವಂತೆ ಶಿಕ್ಷಣ ಇಲಾಖೆ ಅಧಿಕಾರಿ ವಿವಾದಾತ್ಮಕ ಸುತ್ತೋಲೆ ಹೊರಡಿಸಿದ್ದು, ಸುತ್ತೋಲೆಯು ಟೀಕೆಗೆ ಒಳಗಾಗುತ್ತಿದ್ದಂತೆ ಅದನ್ನು ಹಿಂಪಡೆದಿದ್ದಾರೆ.
ಜನವರಿ 12ರ ಗುರುವಾರದಂದು ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ. ಈ ಸಮಾರಂಭದ ವೇಳೆ ಪಟ್ಟಣದ ಎಲ್ಲಾ ಪಿಯು ಕಾಲೇಜುಗಳ ಪ್ರಾಂಶುಪಾಲರು ಕನಿಷ್ಠ 100 ವಿದ್ಯಾರ್ಥಿಗಳನ್ನು ಕರೆತರುವಂತೆ ಧಾರವಾಡ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಾನಾಯ್ಕ್ ಸುತ್ತೋಲೆ ಹೊರಡಿಸಿದ್ದಾರೆ.
ರಾಷ್ಟ್ರೀಯ ಯುವಜನೋತ್ಸವಕ್ಕೆ ತಮ್ಮದೇ ಆದ ಜವಾಬ್ದಾರಿಯಡಿಯಲ್ಲಿ ಜನವರಿ 9 ರಂದು ಹೊರಡಿಸಿದ ಆದೇಶದಲ್ಲಿ, ಹುಬ್ಬಳ್ಳಿ ನಗರ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪಿಯು ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜಿನ ಕನಿಷ್ಠ 100 ವಿದ್ಯಾರ್ಥಿಗಳನ್ನು ಕರೆತರುವಂತೆ ಅವರು ಸೂಚಿಸಿದ್ದಾರೆ.
ಸುತ್ತೋಲೆಯು ವಿವಾದವಾಗುತ್ತಿದ್ದಂತೆ ಅದರಕ್ಕೆ ಪ್ರತಿಕ್ರಿಯಿಸಿರುವ ಕೃಷ್ಣಾನಾಯ್ಕ್, “ಅಜಾಗರೂಕತೆಯಿಂದ ತಪ್ಪಾಗಿ ಆದೇಶ ಹೊರಡಿಸಲಾಗಿದ್ದು, ಈಗ ಅದನ್ನು ಹಿಂಪಡೆಯಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಹೊಸ ಸುತ್ತೋಲೆ ಹೊರಡಿಸಲಾಗುವುದು” ಎಂದು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.