

ಆಧಾರ ರಹಿತವಾಗಿ, ಧರ್ಮಗಳ ನಡುವೆ ಕಲಹ ಉಂಟು ಮಾಡುವಂತೆ ರಚನೆಯಾಗಿರುವ ‘ಟಿಪ್ಪು ನಿಜಕನಸುಗಳು’ ಕೃತಿ ಮಾರಾಟ ಮಾಡದಂತೆ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿರುವ ಬೆನ್ನಲ್ಲೆ ಬಿಜೆಪಿಯು ಇಂದು ‘ಸಿದ್ದು ನಿಜಕನಸುಗಳು’ ಎಂಬ ಪುಸ್ತಕ ಬಿಡುಗಡೆಗೆ ಮುಂದಾಗಿದೆ. ಇದು ಮಾಜಿ ಸಿಎಂ ಸಿದ್ದರಾಮಯ್ಯನವರ ತೇಜೋವಧೆ ಮಾಡಲು ನಡೆಸಿರುವ ಪಿತೂರಿ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷವು ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದುಪಡಿಸುವಂತೆ ಒತ್ತಾಯಿಸಿ ಪೊಲೀಸರಿಗೆ ದೂರು ನೀಡಿದೆ.
“ಸಿದ್ದು ನಿಜಕನಸುಗಳು” ಎಂಬ ಪುಸ್ತಕದ ಮೂಲಕ ಹಲವು ಸೂಕ್ಷ್ಮ ವಿಷಯಗಳನ್ನು ಬಹಿರಂಗಪಡಿಸುವ ಜತೆ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಿ ಕೊಡುವ ಪ್ರಯತ್ನವನ್ನು ಶ್ಲಾಘಿಸುತ್ತೇನೆ. ಈ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ನೀವೂ ಬನ್ನಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಆಹ್ವಾನ ಪತ್ರಿಕೆಯನ್ನು ಟ್ವೀಟ್ ಮಾಡಿದ್ದಾರೆ.
ಆಹ್ವಾನ ಪತ್ರಿಕೆಯ ಪ್ರಕಾರ ಈ ಪುಸ್ತಕವನ್ನು ವಿಕೆಪಿ ಎಂಬ ಅನಾಮಧೇಯ ವ್ಯಕ್ತಿ ಬರೆದಿದ್ದಾರೆ. ಇದು ಮೊದಲ ಸಂಪುಟವಾಗಿದ್ದು, ಇನ್ನು ಹಲವು ಸಂಪುಟಗಳನ್ನು ರಚಿಸುವ ಉದ್ದೇಶ ಬಿಜೆಪಿಗಿದೆ ಎಂಬುದು ತಿಳಿದುಬಂದಿದೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಟೌನ್ಹಾಲ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ.ಅಶ್ವಥ್ ನಾರಾಯಣ್ ಪುಸ್ತಕ ಬಿಡುಗಡೆ ಮಾಡಿದರೆ, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪಠ್ಯಪುಸ್ತಕ ತಿರುಚಿದ ಆರೋಪ ಹೊತ್ತಿರುವ ಬಲಪಂಥೀಯ ಬರಹಗಾರ-ಪತ್ರಕರ್ತರಾದ ರೋಹಿತ್ ಚಕ್ರತೀರ್ಥ, ವೃಶಾಂಕ್ ಭಟ್, ಸಂತೋಷ್ ತಮ್ಮಯ್ಯ ಮತ್ತು ರಾಕೇಶ್ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಎನ್ನಲಾಗಿದೆ.

ಈ ಪುಸ್ತಕವು ಸಿದ್ದರಾಮಯ್ಯನವರ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರ ಮಾಡಲು ಮತ್ತು ಒಂದು ಸಮುದಾಯವನ್ನು ತುಚ್ಛೀಕರಣ ಮಾಡಲು ರಚಿಸಲಾಗಿದೆ ಎಂದು ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಎಸ್ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
“ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವ ದುರುದ್ದೇಶದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಜ.9ರಂದು ಮಧ್ಯಾಹ್ನ 3 ಗಂಟೆಗೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬರುವ ಪುರಭವನದಲ್ಲಿ ಈ ಕಾರ್ಯಕ್ರಮ ಇರುವ ಬಗ್ಗೆ ಆಹ್ವಾನ ಪತ್ರಿಕೆ ಹರಿದಾಡುತ್ತಿದೆ ಸಿದ್ದರಾಮಯ್ಯ ಅವರ ವಿರೂಪಗೊಳಿಸಿದ ಭಾವಚಿತ್ರವನ್ನು ಬಳಸಿ ‘ಸಿದ್ದು ನಿಜಕನಸುಗಳು’ ಎಂಬ ಶೀರ್ಷಿಕೆಯಡಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪತ್ರಿಕೆಯಲ್ಲಿನ ಪುಸ್ತಕದ ಮುಖಪುಟ ವಿಪಕ್ಷ ನಾಯಕರ ಅವಹೇಳನಕಾರಿ, ಕಪೋಲಕಲ್ಪಿತ, ಪ್ರಚೋದನಕಾರಿ ಲೇಖನಗಳನ್ನು ಒಳಗೊಂಡಿರುವುದು ಸ್ಪಷ್ಟವಾಗಿದೆ. ಇಂತಹ ದ್ವೇಷಪೂರಿತ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ ಕಾಂಗ್ರೆಸ್ ಪಕ್ಷವು ಬಿಜೆಪಿಯ ಪುಸ್ತಕ ಬಿಡುಗಡೆಗೆ ತಿರುಗೇಟು ನೀಡಲು ಸಜ್ಜಾಗಿದೆ. ಸಿದ್ದರಾಮಯ್ಯ ಸರ್ಕಾರದ ಅಭಿವೃದ್ದಿ ಯೋಜನೆಗಳ ಸಾಲು ಸಾಲು ಪೋಸ್ಟರ್ಗಳನ್ನು ಬಿಡುಗಡೆ ಮಾಡಿದೆ.