

ಬೆಳಗಾವಿ: ಇಲ್ಲಿನ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ (Winter Session in Belagavi) 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆಗೆ (Raghunath Vishwanath Rao Deshpande) ಅತ್ಯುತ್ತಮ ಶಾಸಕ ಪ್ರಶಸ್ತಿ ಲಭ್ಯವಾಗಿದೆ. ಅತ್ಯುತ್ತಮ ಶಾಸಕ ಪ್ರಶಸ್ತಿ ಕಳೆದ ವರ್ಷದಿಂದ ಆರಂಭಗೊಂಡಿದೆ. ಶಿಕಾರಿಪುರ ಕ್ಷೇತ್ರದ ಶಾಸಕ ಬಿ ಎಸ್ ಯಡಿಯೂರಪ್ಪ ಅವರು ಮೊದಲ ಪ್ರಶಸ್ತಿಗೆ ಭಾಜನರಾಗಿದ್ದರು.
ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರು ಶಾಸಕ ಆರ್.ವಿ.ದೇಶಪಾಂಡೆಗೆ ಇಂದು ಪ್ರಶಸ್ತಿ ಪ್ರದಾನ ಮಾಡಿದರು. 75 ವರ್ಷ ವಯಸ್ಸಿನ ಹಿರಿಯ ನಾಯಕ ದೇಶಪಾಂಡೆ ಅವರು ಇದುವರೆಗೂ 9 ಬಾರಿ ಅಸೆಂಬ್ಲಿ ಚುನಾವಣೆ ಎದುರಿಸಿದ್ದಾರೆ. ದೇಶಪಾಂಡೆ ಅವರು ತಮ್ಮ ಹುಟ್ಟೂರಾದ ಹಳಿಯಾಳ ಅಸೆಂಬ್ಲಿ ಕ್ಷೇತ್ರವನ್ನು ಕಾಂಗ್ರೆಸ್ ವತಿಯಿಂದ ಪ್ರತಿನಿಧಿಸಿದ್ದಾರೆ.
1947 ಮಾರ್ಚ್ 16ರಂದು ಜನಿಸಿದ ದೇಶಪಾಂಡೆ ಅವರು ಬಿಎ, ಎಲ್ಎಲ್ಬಿ ವ್ಯಾಸಂಗ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಸಾರ್ವಜನಿಕ ಸೇವೆಗೆ ಅಂಕಿತರಾದ ದೇಶಪಾಂಡೆ ಅವರು ಜನತಾಪರಿವಾರದೊಂದಿಗೆ ವಿಧಾನಸಭೆ ಪ್ರವೇಶಿಸಿದರು. ಎಸ್ ಎಂ ಕೃಷ್ಣ ಮತ್ತು ಸಿದ್ದರಾಮಯ್ಯ ಸಂಪುಟದಲ್ಲಿ ಅತ್ಯಂತ ದೀರ್ಘಾವಧಿಗೆ 13 ವರ್ಷ ಕಾಲ ಕೈಗಾರಿಕಾ ಸಚಿವರಾಗಿದ್ದರು.