

ಮಂಗಳೂರು: ಜಲೀಲ್ ಯಾವುದೇ ಗಲಾಟೆಗೆ ಹೋಗದ ಬಡಪಾಯಿಯಾಗಿದ್ದು, ರಾಜಕಾರಣಕ್ಕಾಗಿ ಆತನನ್ನು ಕೊಲೆ ಮಾಡಿದ್ದಾರೆ ಎಂದು ಮೃತ ಜಲೀಲ್ ಸಹೋದರ ಮಹಮ್ಮದ್ ಆರೋಪಿಸಿದರು.
ಆಸ್ಪತ್ರೆ ಬಳಿ ಮಾತನಾಡಿದ ಅವರು, ನಾವು ಮನೆಯಲ್ಲಿ ಇದ್ದ ವೇಳೆ ಜಲೀಲ್ ಕೊಲೆಯಾಗಿದೆ. ಆದರೆ ಅವನು ಯಾವುದೇ ಗಲಾಟೆಗೆ ಹೋಗದ ಬಡಪಾಯಿಯಾಗಿದ್ದು, ಬೆಳಿಗ್ಗೆ ಅಂಗಡಿಗೆ ಬಂದು ವ್ಯವಹಾರ ಮಾಡಿ ರಾತ್ರಿ ಮನೆಗೆ ಹೋಗುತ್ತಿದ್ದ. ಆತ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರಿಗೂ ಬೇಕಾದವನಾಗಿದ್ದ. ಯಾವುದೇ ಚಟುವಟಿಕೆಗೆ ಹೋಗದ ಆತ ಶಾಂತಿಪ್ರಿಯನಾಗಿದ್ದ. ಯಾರ ಜೊತೆಗೂ ಜೋರಾಗಿಯೂ ಮಾತನಾಡದಂತ ಅವನನ್ನೇ ಬಿಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಬ್ಬರು ಬೈಕ್‍ನಲ್ಲಿ ಬಂದು ಜಲೀಲ್‌ನನ್ನು ಕೊಲೆ ಮಾಡಿ ಹೋಗಿದ್ದಾರೆ. ಅವನು ಪತ್ನಿ ಮತ್ತು ಮಗನ ಜೊತೆ ಮನೆಯಲ್ಲಿ ವಾಸವಾಗಿದ್ದ. ಕಾಟಿಪಳ್ಳ ನಾಲ್ಕನೇ ಬ್ಲಾಕ್‍ನಲ್ಲಿ ಅವನ ಮನೆ ಇತ್ತು. ಆದರೆ ಅವನು ಯಾವುದೇ ಸಂಘಟನೆ, ರಾಜಕೀಯದಲ್ಲಿ ಇರಲಿಲ್ಲ. ಸುಮಾರು 10-15 ವರ್ಷದಿಂದ ಅವನು ಅಲ್ಲಿ ಅಂಗಡಿ ನಡೆಸ್ತಾ ಇದ್ದ ಎಂದು ಮಾಹಿತಿ ನೀಡಿದರು.
ಅವನಿಗೆ ಶತ್ರುಗಳು ಅಂತ ಯಾರೂ ಇರಲೇ ಇಲ್ಲ. ಇದು ರಾಜಕಾರಣಕ್ಕಾಗಿ ಅಮಾಯಕನ ಕೊಲೆಯಾಗಿದೆ. ನಮಗೆ ಸರ್ಕಾರ ನ್ಯಾಯ ಕೊಡಬೇಕು, ನೈಜ ಆರೋಪಿ ಬಂಧಿಸಬೇಕು. ಯಾರ‍್ಯಾರನ್ನೋ ಹಿಡಿಯೋ ಅಗತ್ಯವಿಲ್ಲ, ನೈಜ ಆರೋಪಿಗಳನ್ನು ಹಿಡಿಯಿರಿ ಎಂದು ಒತ್ತಾಯಿಸಿದರು.