

ಲಕ್ನೋ: ಶಾಹಿ ಈದ್ಗಾ ಮಸೀದಿಯನ್ನು (Shahi Idgah Mosque) ಸಮೀಕ್ಷೆ ಮಾಡಲು ಉತ್ತರ ಪ್ರದೇಶದ ಮಥುರಾ ನ್ಯಾಯಾಲಯವು (Mathura Court) ಮಹತ್ವದ ಆದೇಶ ನೀಡಿದೆ.
ಜನವರಿ 2 ರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ (Archaeological Survey Of India) ಸಮೀಕ್ಷೆ ಮಾಡಲು ಕೋರ್ಟ್ ಆದೇಶಿಸಿದೆ. ಅಲ್ಲದೇ ಇದಕ್ಕೆ ಸಂಬಂಧಪಟ್ಟ ವರದಿಯನ್ನು ಜನವರಿ 20ರ ನಂತರ ನೀಡುವಂತೆಯೂ ಕೋರ್ಟ್ ಸೂಚಿಸಿದೆ.
ಹಿಂದೂ ಸೇನೆಯ (Hindu Sena) ವಿಷ್ಣು ಗುಪ್ತಾ ಅವರು ಸಲ್ಲಿಸಿದ್ದ ಮೊಕದ್ದಮೆಯ ಮೇರೆಗೆ ನ್ಯಾಯಾಲಯ ಈ ಆದೇಶ ನೀಡಿದೆ. ಕತ್ರಾ ಕೇಶವ್ ದೇವ್ ದೇವಸ್ಥಾನದಿಂದ 17ನೇ ಶತಮಾನದ ಶಾಹಿ ಈದ್ಗಾ ಮಸೀದಿಯನ್ನು ಕೆಡವಲು ಒತ್ತಾಯಿಸಿ ಹಿಂದೂ ಸಂಘಟನೆಗಳು ಮಾಡಿದ್ದ ಮೊಕದ್ದಮೆಗಳಲ್ಲಿ ಇದು ಒಂದಾಗಿದೆ. ಈ ಮಸೀದಿಯನ್ನು ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬುದು ಹಿಂದೂ ಸಂಘಟನೆಗಳ ವಾದವಾಗಿದೆ.
ಜ್ಞಾನವ್ಯಾಪಿ ಮಸೀದಿ (Gyanvapi Mosque) ಸಮೀಕ್ಷೆಗೆ ಅನುಮತಿ ಸಿಕ್ಕಿದ ಬೆನ್ನಲ್ಲೇ ಕಳೆದ ಮೇ 19ರಂದೇ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ವಿವಾದ ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆಗೆ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಗಳು ವಿಚಾರಣೆಗೆ ಅರ್ಹವಾಗಿದೆ ಎಂದು ಮಥುರಾ ಜಿಲ್ಲಾ ನ್ಯಾಯಾಲಯ ಹೇಳಿತ್ತು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಸಲಾಯಿತು.
ಏನಿದು ವಿವಾದ?
ಶಾಹಿ ಈದ್ಗಾ ಮಸೀದಿಯ 13.37 ಎಕರೆ ಸಂಪೂರ್ಣ ಭೂಮಿಯನ್ನು ಡಿ-ಫಾಕ್ಟೋ ಮಾಲೀಕ ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ಹಸ್ತಾಂತರಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ವಕೀಲರಾದ ರಂಜನಾ ಅಗ್ನಿಹೋತ್ರಿ ಸೇರಿ ಇತರ ಆರು ಮಂದಿ ಕಳೆದ ವರ್ಷ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಇನ್ನೂ ಅನೇಕ ಮಂದಿ ಅರ್ಜಿ ಸಲ್ಲಿಸಿದ್ದರು. ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್, ಶಾಹಿ ಈದ್ಗಾ ಮಸೀದಿ, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಮತ್ತು ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನವನ್ನು ಪ್ರಕರಣದಲ್ಲಿ ಭಾಗಿ ಮಾಡಲಾಗಿದ್ದು, ಮೇ 6 ರಂದು ಕೋರ್ಟ್ ವಿಚಾರಣೆ ಅಂತ್ಯಗೊಳಿಸಿತ್ತು.