

ನವದೆಹಲಿ: ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ದಿನದ 24 ಗಂಟೆಯೂ ಹಿಂದೂ-ಮುಸ್ಲಿಮರ (Hindu-Muslim ನಡುವೆ ದ್ವೇಷವನ್ನು ಹರಡುತ್ತಿದೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯ (New Delhi) ಕೆಂಪು ಕೋಟೆಯಲ್ಲಿ ʼಭಾರತ್ ಜೋಡೋ ಯಾತ್ರೆʼಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡು ದ್ವೇಷವನ್ನು ಹರಡುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಾನು 2,800 ಕಿಮೀ ನಡೆದಿದ್ದೇನೆ. ಆದರೆ ಯಾವುದೇ ದ್ವೇಷವನ್ನು ನೋಡಲಿಲ್ಲ. ಆದರೆ ಟಿವಿ ಆನ್ ಮಾಡಿದಾಗ, ನಾನು ಹಿಂಸೆಯನ್ನು ನೋಡುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದು ನರೇಂದ್ರ ಮೋದಿಯವರ ಸರ್ಕಾರವಲ್ಲ. ಇದು ಅಂಬಾನಿ ಮತ್ತು ಅದಾನಿ ಸರ್ಕಾರ. ಇಂದು ಪದವಿ ಪಡೆದ ಯುವಕರು ಪಕೋಡಾಗಳನ್ನು ಮಾರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ದೆಹಲಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ನಟ ಕಮಲ್ ಹಾಸನ್ ಕೂಡ ಪಾಲ್ಗೊಂಡಿದ್ದರು. “ದೇಶವನ್ನು ಒಗ್ಗೂಡಿಸಲು ಸಹಾಯ ಮಾಡಿ, ಒಡೆಯಬೇಡಿ” ಎಂದು ಇದೇ ವೇಳೆ ಹಾಸನ್ ಮನವಿ ಮಾಡಿದ್ದಾರೆ.