

ಗದಗ: ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿದ್ದ ವಿದ್ಯಾರ್ಥಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಪ್ರಾಣ ಪಕ್ಷಿ ಹಾಕಿ ಹೋಗಿದೆ. ಚಿಕಿತ್ಸೆ ಫಲಕಾರಿಯಾಗದೆ ಅತಿಥಿ ಶಿಕ್ಷಕನಿಂದ ಹಲ್ಲೆಗೊಳಗಾಗಿದ್ದ ಅತಿಥಿ ಶಿಕ್ಷಕಿ ಗೀತಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಡಿಸೆಂಬರ್ 19 ರಂದು ಗದಗ ಜಿಲ್ಲೆ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಎನ್ನುವಾತ, ಭರತ್ ಹಾಗೂ ಗೀತಾಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ಅಂದೇ ಭರತ್ ಸಾವನ್ನಪ್ಪಿದ್ದ, ಗಂಭೀರವಾಗಿ ಗಾಯಗೊಂಡಿದ್ದ ಗೀತಾ ಬಾರಕೇರ್ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆ ಹಿನ್ನೆಲೆ
ಗದಗ ಜಿಲ್ಲೆ ನರಗುಂದ ತಾಲೂಕಿನ ಹದಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 11.30 ರ ಸಮಯದಲ್ಲಿ ವಿದ್ಯಾರ್ಥಿಗಳೆಲ್ಲಾ ಪಾಠ ಕೇಳೋದ್ರಲ್ಲಿ ಮಗ್ನರಾಗಿದ್ರು. ಆದ್ರೆ ಅಂಥಾ ಹೊತ್ತಲ್ಲೇ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಶಾಲೆಯ ಒಂದನೇ ಮಹಡಿಯಲ್ಲಿರೋ ನಾಲ್ಕನೇ ತರಗತಿಯ ಕ್ಲಾಸ್ ರೂಮ್‌ಗೆ ಹೋಗಿ ಅದೇ ತರಗತಿ ವಿದ್ಯಾರ್ಥಿ ಭರತ್ ಬಾರಕೇರ್ ಅನ್ನೋನನ್ನ ಹೊರ ಕರೆದುಕೊಂಡು ಬಂದು ಕ್ಲಾಸ್ ರೂಮ್‌ಗೆ ಹೊರಗಿನಿಂದಲೇ ಲಾಕ್ ಮಾಡಿದ್ದ. ನೋಡ ನೋಡ್ತಿದ್ದಂತೆ ಸಲಿಕೆಯಿಂದ ಭರತ್ ಮೇಲೆ ಹಲ್ಲೆ ನಡೆಸಿ ಅಟ್ಟಾಡಿಸಿಕೊಂಡು ಬಡಿದು ಪಿಲ್ಲರ್‌ಗೆ ಗುದ್ದಿದ್ದ. ಬಳಿಕ ಮೇಲಿನಿಂದ ಕೆಳೆಗೆ ಎಸೆದಿದ್ದ.
ಮಗನ ರಕ್ಷಣೆಗೆ ಬಂದ ಶಿಕ್ಷಕಿ ಮೇಲೂ ಅಟ್ಯಾಕ್
ಭರತ್‌ನ ತಾಯಿ ಗೀತಾ ಕೂಡಾ ಇದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ರು. ಪುತ್ರ ಭರತ್ ಮೇಲೆ ಹಲ್ಲೆ ಆಗ್ತಿರೋದನ್ನ ಕಂಡು ಓಡೋಡಿ ಬಂದ ಗೀತಾ ಮಗನನ್ನ ಬಿಡಿಸಿಕೊಳ್ಳಲು ಮುಂದಾದ್ರು. ಆದ್ರೆ ಆಕೆಯ ಮೇಲೂ ಸಲಿಕೆಯಿಂದ ತಲೆಗೆ ಹೊಡೆದು ಅತಿಥಿ ಶಿಕ್ಷಕ ಎಸ್ಕೇಪ್ ಆಗಿದ್ದ. ಇನ್ನೂ ಇಬ್ಬರನ್ನೂ ನರಗುಂದದ ಆಸ್ಪತ್ರೆಗೆ ಕರೆದೊಯ್ಯಲಾಯ್ತಾದ್ರೂ, ಭರತ್ ಮಾರ್ಗ ಮಧ್ಯೆಯೇ ಪ್ರಾಣ ಬಿಟ್ಟಿದ್ದ. ಶಿಕ್ಷಕಿ ಗೀತಾಳನ್ನ ಹುಬ್ಬಳ್ಳಿಯ ಕಿಮ್ಸ್‌ಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆಗೆ ಅನೈತಿಕ ಸಂಬಂಧದ ಶಂಕೆ
ಘಟನೆಯ ಹಿಂದೆ ಅನೈತಿಕ ಸಂಬಂಧ ಇರುವ ಶಂಕೆ ವ್ಯಕ್ತವಾಗಿದೆ. ಹಂತಕ ಅತಿಥಿ ಶಿಕ್ಷಕ ಮುತ್ತಪ್ಪ ಮತ್ತು ಮೃತ ಅತಿಥಿ ಶಿಕ್ಷಕಿ ಗೀತಾ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗುತ್ತಿದ್ದು, ಶೈಕ್ಷಣಿಕ ಪ್ರವಾಸಕ್ಕೆ ಹೋದಾಗ ಶಿಕ್ಷಕ, ಶಿಕ್ಷಕಿ ನಡುವೆ ಜಗಳ ನಡೆದಿದೆ. ಹೀಗಾಗಿ ಮುತ್ತಪ್ಪನಿಂದ ಗೀತಾ ಅಂತರ ಕಾಯ್ದುಕೊಂಡಿದ್ದಳು. ಇದೇ ಕಾರಣಕ್ಕೆ ರೊಚ್ಚಿಗೆದ್ದ ಮುತ್ತಪ್ಪ ಶಾಲೆಯಲ್ಲಿ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಇಲಾಖೆ ಉನ್ನತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.