

ನ್ಯೂಯಾರ್ಕ್: ಚೀನಾ ಮಾತ್ರವಲ್ಲ, 5 ವಿದೇಶಗಳಲ್ಲಿ ಮತ್ತೆ ಕೋವಿಡ್ ಪ್ರಕರಣ ಹಾಗೂ ಸೋಂಕಿತರ ಸಾವಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್, ಬ್ರೆಜಿಲ್, ಅಮೆರಿಕ ಅತಿ ಹೆಚ್ಚು ದೈನಂದಿನ ಕೇಸುಗಳು ವರದಿಯಾಗುತ್ತಿರುವ ಟಾಪ್ 5 ದೇಶಗಳು ಎನಿಸಿಕೊಂಡಿವೆ. ಈ ದೇಶಗಳಲ್ಲಿ ಈಗ ಭರ್ಜರಿ ಚಳಿಗಾಲ ಇದ್ದು, ಇದು ಕೋವಿಡ್ ಏರಿಕೆಗೆ ಕಾರಣ ಎನ್ನಲಾಗಿದೆ.
ಜಪಾನ್‌ನಲ್ಲಿ (Japan) ನ.14ರಿಂದ 20ರವರೆಗಿನ ವಾರದ ಸರಾಸರಿ ಕೋವಿಡ್ ಕೇಸು 84,725ರಷ್ಟಿದ್ದು, ಡಿಸೆಂಬರ್‌ನಲ್ಲಿ (December) ಇದು 1.52 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ರೀತಿ ನವೆಂಬರ್‌ನಲ್ಲಿ 100ರಷ್ಟಿದ್ದ ಸರಾಸರಿ ಸಾವಿನ ಪ್ರಮಾಣ ಡಿಸೆಂಬರ್‌ನಲ್ಲಿ 241ಕ್ಕೆ ಏರಿಕೆಯಾಗಿದೆ. ಆದರೆ ಅಮೆರಿಕದಲ್ಲಿ ಕೋವಿಡ್ ಅಬ್ಬರ ಕೊಂಚ ತಗ್ಗಿದೆ. ನವೆಂಬರ್‌ನಲ್ಲಿ ಸರಾಸರಿ 42,550 ಕೇಸುಗಳು ವರದಿಯಾಗಿದ್ದರೆ, ಡಿಸೆಂಬರ್‌ನಲ್ಲಿ ಅವುಗಳ ಪ್ರಮಾಣ 34,923ಕ್ಕೆ ಇಳಿದಿದೆ. ಇದೇ ರೀತಿ ಸಾವಿನ ಸಂಖ್ಯೆಯೂ 362 ರಿಂದ 214 ಕ್ಕೆ ಕುಸಿದಿದೆ.
10 ಕೋಟಿ ದಾಟಿದ ಸೋಂಕಿತರು
ವಿಶ್ವದಲ್ಲೇ ಅತಿಹೆಚ್ಚು ಕೋವಿಡ್ ಸೋಂಕು ಮತ್ತು ಸಾವಿಗೆ ಸಾಕ್ಷಿಯಾದ ಅಮೆರಿಕದಲ್ಲಿ ಇದೀಗ ಕೋವಿಡ್ (Covid infection) ಸೋಂಕಿತರ ಸಂಖ್ಯೆ 10 ಕೋಟಿ ದಾಟಿದೆ. ವಿಶ್ವದಲ್ಲಿ ಯಾವುದೇ ದೇಶವೊಂದರಲ್ಲಿ ಸೋಂಕಿತರ ಪ್ರಮಾಣ ಈ ಮಟ್ಟ ಮುಟ್ಟಿರುವುದು ಇದೇ ಮೊದಲು. ಇನ್ನು ಸೋಂಕಿಗೆ ಇದುವರೆಗೂ ದೇಶದಲ್ಲಿ 10,88,236 ಜನರು (10.88 ಲಕ್ಷ ಜನ) ಸಾವನ್ನಪ್ಪಿದ್ದಾರೆ.
ಅಮೆರಿಕ ಮೂಲದ ಜಾನ್ ಹಾಪ್‌ಕಿನ್ಸ್ ವಿವಿ ಬಿಡುಗಡೆ ಮಾಡಿರುವ ವರದಿ ಅನ್ವಯ ಮಂಗಳವಾರ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 100,003,837 ತಲುಪಿದೆ. ಈ ಲೆಕ್ಕಾಚಾರದ ಅನ್ವಯ 2020ರಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡ ಅಮೆರಿಕದಲ್ಲಿ, ಪ್ರತಿದಿನ ಸರಾಸರಿ 13 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾದಂತೆ ಆಗಿದೆ. ಜೊತೆಗೆ ಪ್ರತಿದಿನ 1350 ಜನರು ಸಾವನ್ನಪ್ಪಿದಂತೆ ಆಗಿದೆ. ಅಮೆರಿಕದಲ್ಲಿ ಡಿಸೆಂಬರ್ ಬಳಿಕ ಮತ್ತೆ ಹೊಸ ಪ್ರಕರಣಗಳಲ್ಲಿ ಏರಿಕೆಯಾಗಿದ್ದು ನಿತ್ಯ 20,000-50,000ದಷ್ಟು ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, 100-300 ಜನರು ಸಾವನ್ನಪ್ಪುತ್ತಿದ್ದಾರೆ.