

ಬೆಂಗಳೂರು (ಡಿ.21) : 2023 ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಮತ್ತಷ್ಟು ವೇಗವನ್ನು ನೀಡಿದೆ . ಜಿಲ್ಲಾವಾರು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಮಾರ್ಗಸೂಚಿಯನ್ನು ಪ್ರಕಟ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಭ್ಯರ್ಥಿಗಳನ್ನ ಅಂತಿಮಗೊಳಿಸಲು ಮಾರ್ಗಸೂಚಿ ಹೊರಡಿಸಿದ್ದಾರೆ.
ಪ್ರತೀ ಕ್ಷೇತ್ರಕ್ಕೆ ಸೂಕ್ತವಾದ 1 ರಿಂದ 3 ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿಗೆ ಗೌಪ್ಯವಾಗಿ ತಲುಪಿಸಬೇಕು.
ಜಿಲ್ಲಾ ಚುನಾವಣಾ ಸಮಿತಿಯು ಜಿಲ್ಲೆಯ ಮಂಚೂಣಿ ಘಟಕಗಳ, ವಿಭಾಗಗಳ ಮತ್ತು ಸೆಲ್‌ಗಳ ಅಧ್ಯಕ್ಷರುಗಳ ಜೊತೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಅವರ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು.
ಪ್ರತೀ ಕ್ಷೇತ್ರದಿಂದ ಮೊದಲು ಕಾರ್ಯಕರ್ತರನ್ನು ಕರೆಸಿ ಮಾತನಾಡಬೇಕು. ನಂತರ ಕ್ಷೇತ್ರದ ನಾಯಕರುಗಳನ್ನು ಕರೆಸಿ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಬೇಕು ಆ ನಂತರ ಕಾರ್ಯಕರ್ತರು ಮತ್ತು ನಾಯಕರ ಸಭೆ ನಡೆಸಬೇಕು. ಪ್ರತಿ ಕ್ಷೇತ್ರಕ್ಕೂ ಪ್ರತ್ಯೇಕವಾಗಿ ಸಮಯಗಳನ್ನು ನಿಗದಿ ಮಾಡಬೇಕು. ಬ್ಲಾಕ್ ಸಮಿತಿಯ ಅಭಿಪ್ರಾಯವನ್ನು ತಪ್ಪದೇ ಸಂಗ್ರಹಿಸಬೇಕು
ಚುನಾವಣಾ ಸಮಿತಿಯು ಕ್ಷೇತ್ರವಾರು ಸಭೆಗಳನ್ನು ಜಿಲ್ಲಾ ಕಾಂಗ್ರೆಸ್ ಕಛೇರಿ ಅಥವಾ ಸಮುದಾಯ ಭವನದಲ್ಲಿ ನಿಗದಿ ಪಡಿಸಿದ ಸಮಯದಲ್ಲಿ ಜರಗಿಸಬೇಕು. ಯಾರದೇ ಮನೆ ಅಥವಾ ವೈಯಕ್ತಿಕ ಕಛೇರಿಗಳಲ್ಲಿ ಸಭೆಗಳನ್ನು ನಡೆಸುವಂತಿಲ್ಲ.
ಸಭೆಯ ಕಲಾಪಗಳ ಧ್ವನಿ ಮುದ್ರಣ (ರೆಕಾರ್ಡಿಂಗ್), ಅಥವಾ ವಿಡಿಯೋ ರೆಕಾರ್ಡಿಂಗ್ ಗಳನ್ನು ಮಾಡಲು ಯಾವುದೇ ರಿತಿಯಲ್ಲಿ ಅವಕಾಶ ನೀಡಬಾರದು. ಮತ್ತು ಮಾಧ್ಯಮದವರಿಗೆ ಸಭೆಗೆ ಆಹ್ವಾನ ಮಾಡಬಾರದು ಮತ್ತು ಅವರಿಗೆ ಯಾವುದೇ ಪ್ರತಿಕ್ರೀಯೆಯನ್ನು ನೀಡಬಾರದು.
ಜಿಲ್ಲಾ ಚುನಾವಣಾ ಸಮಿತಿಯು ಚುನಾವಣೆಗಳಲ್ಲಿ ಗೆಲ್ಲುವಂತಹ ಸೂಕ್ತ ಅಭ್ಯರ್ಥಿಗೆ ಆದ್ಯತೆ ನೀಡುವುದರ ಜೊತೆಗೆ ಅವರ ಹಿನ್ನೆಲೆ, ಕ್ಷೇತ್ರದಲ್ಲಿ ಅವರಿಗಿರುವ ಮಾನ್ಯತೆ, ಅಕ್ಕ ಪಕ್ಕದ ಕ್ಷೇತ್ರಗಳಲ್ಲಿ ಅವರು ಹೊಂದಿರುವ ಪ್ರಭಾವ ಹಾಗೂ ಚುನಾವಣೆಯನ್ನು ಎಲ್ಲರ ಸಹಕಾರ ಪಡೆದು ನಿರ್ವಹಿಸಬಲ್ಲ ಸಾಮರ್ಥ್ಯ ಮತ್ತು ಸಂಪನ್ಮೂಲ ಮುಂತಾದ ವಿಷಯಗಳನ್ನು ಕೂಡ ಗಮನದಲ್ಲಿರಿಸಿ.
ನಮ್ಮ ಪಕ್ಷದ ಸಿದ್ಧಾಂತ, ಆದರ್ಶಗಳಿಗೆ ಅನುಗುಣವಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸಿ, ಸಮಾಜದ ಎಲ್ಲಾ ವರ್ಗಗಳಿಗೆ ಸಮಾನವಾದ ಅವಕಾಶ ಸಿಗುವಂತ ನೋಡಿಕೊಳ್ಳಬೇಕು.
ಯಾವುದೇ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಹಾಗೂ ಕೋಮುವಾದವನ್ನು ಪ್ರಚೋದಿಸಿರುವ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮತ್ತು ತತ್ವಗಳ ವಿರುದ್ಧವಾಗಿರುವ ಆಚಾರ ಮತ್ತು ವಿಚಾರವನ್ನು ಪ್ರತಿಪಾದಿಸುವ ಯಾವುದೇ ಆಕಾಂಕ್ಷಿಗೆ ಅವಕಾಶ ನೀಡಬಾರದು
ಜಿಲ್ಲಾ ಚುನಾವಣಾ ಸಮಿತಿಯ ಸಭೆಯಲ್ಲಿ ಯಾವುದೇ ಕಾರಣಕ್ಕೂ ಸಮಿತಿಯ ಸದಸ್ಯರಲ್ಲದವರು ಭಾಗವಹಿಸಲು ಅವಕಾಶವಿರಬಾರದು. ನಿಗದಿತ ನಮೂನೆಯಲ್ಲಿ ಬಂದಿರುವ ಎಲ್ಲಾ ಅರ್ಜಿಗಳನ್ನು ಸಮಿತಿಯವರು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಚುನಾವಣಾ ಸಮಿತಿಯ ಸಭೆಗಳ ದಿನಾಂಕ ಮತ್ತು ಸ್ಥಳ ಸಾಕಷ್ಟು ಮುನ್ನವೇ ಸಂಬಂಧಪಟ್ಟ ಎಲ್ಲರಿಗೂ ತಿಳಿಸಿ, ಎಲ್ಲರೂ ಭಾಗವಹಿಸುವಂತೆ ಮಾಡಬೇಕು. ಯಾವುದೇ ಕಾರಣಕ್ಕೂ ಕೆಲವರು ಮಾತ್ರ ಸೇರಿ ತಮಗೆ ಬೇಕಾದ ಕಡೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಮಾಡಬಾರದು.
ಆಯ್ಕೆ ಪ್ರಕ್ರಿಯೆಯನ್ನು ಸಮಿತಿಯು 31/12/2022 ರ ಒಳಗೆ ಮುಗಿಸಿ 1 ರಿಂದ 3 ಸೂಕ್ತ ಅಭ್ಯರ್ಥಿಗಳ ಪಟ್ಟಿಯನ್ನು ವಿವರವಾದ ವರದಿಯೊಂದಿಗೆ ಗೌಪ್ಯವಾಗಿ ದಿನಾಂಕ : 01/01/2023 ರ ಒಳಗಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಬೇಕು.
ಜಿಲ್ಲಾ/ಕ್ಷೇತ್ರ ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ವಿವಾದ ಉಂಟಾದಲ್ಲಿ ಎ.ಐ.ಸಿ.ಸಿ. ಹಾಗೂ ಕೆ.ಪಿ.ಸಿ.ಸಿ, ಉಸ್ತುವಾರಿ ಪದಾಧಿಕಾರಿಗಳ ಸಹಕಾರದಿಂದ ಅದನ್ನು ಪರಿಹರಿಸಿಕೊಂಡು ಸಾಧ್ಯವಾದಷ್ಟು ಸರ್ವಾನುಮತದಿಂದ ಗೆಲ್ಲ ಬಲ್ಲ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸತಕ್ಕದ್ದು.