

ದೆಹಲಿ: ಚೀನಾ ಮತ್ತು ಇತರ ಕೆಲವು ದೇಶಗಳಲ್ಲಿ ಕೊವಿಡ್-19 (Covid) ಪ್ರಕರಣಗಳು ಏಕಾಏಕಿ ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಬುಧವಾರ (ಡಿ 21) ಹೊಸ ಅಧಿಸೂಚನೆ ಹೊರಡಿಸಿದ್ದು, ಕೊವಿಡ್ ವೈರಾಣು (Corona Virus) ತಪಾಸಣೆ ವೇಳೆ ಪಾಸಿಟಿವ್ ಬಂದ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗಾಗಿ ಗರಿಷ್ಠ ಪ್ರಮಾಣದಲ್ಲಿ ಇನ್ಸಾಕಾಗ್ (INSACOG) ಪ್ರಯೋಗಾಲಯಗಳಿಗೆ ಪ್ರತಿದಿನ ಕಳಿಸಬೇಕು. ಈ ಮೂಲಕ ಹೊಸ ರೂಪಾಂತರಿಗಳನ್ನು ಪತ್ತೆ ಹೆಚ್ಚಲು ಸಹಕರಿಸಬೇಕು ಎಂದು ಸೂಚಿಸಿದೆ. ಕೇಂದ್ರ ಅರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರು ದೇಶದ ಕೊವಿಡ್ ಸ್ಥಿತಿಗತಿಯ ಪರಿಶೀಲನಾ ಸಭೆಯನ್ನು ಕರೆದಿದ್ದಾರೆ. ಈ ಸಂಬಂಧ ಭಾರತದ ಎಲ್ಲ ರಾಜ್ಯಗಳ ರಾಜ್ಯ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದು, ‘ಜಿನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸಬೇಕು’ ಎಂದು ಸೂಚಿಸಿದ್ದಾರೆ. ಚೀನಾ ಸೇರಿದಂತೆ ವಿಶ್ವದ ಇತರ ದೇಶಗಳ ಕೊವಿಡ್ ಸೋಂಕು ಪ್ರಕರಣಗಳ ಅಂಕಿಅಂಶ ಮತ್ತು ಆರೋಗ್ಯ ಪರಿಸ್ಥಿತಿಯನ್ನು ಗಮನಿಸಲು ಕೇಂದ್ರ ಸರ್ಕಾರವು ಆಂತರಿಕ ಕಾರ್ಯಪಡೆಯೊಂದನ್ನು ರಚಿಸಿದೆ. ಈ ಸಮಿತಿಯಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿದ್ದು, ಭಾರತದ ಮೇಲಿನ ಪರಿಣಾಮ ಮತ್ತು ಸ್ಥಳೀಯವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಕಣ್ಗಾವಲು ಇರಿಸಲು, ತುರ್ತು ನಿರ್ಧಾರ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಪ್ರಸ್ತುತ ಚೀನಾ ಜೊತೆಗೆ ಜಪಾನ್, ಅಮೆರಿಕ, ಕೊರಿಯಾ ಮತ್ತು ಬ್ರೆಜಿಲ್ ದೇಶಗಳಲ್ಲಿಯೂ ಕೊರೊನಾ ಸೋಂಕು ವ್ಯಾಪಿಸಿದೆ. ಈ ಹಿನ್ನೆಲೆಯಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಬಗ್ಗೆ ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವು ಮಹತ್ವ ಪಡೆದಿದೆ. ಜಿನೋಮ್ ಸೀಕ್ವೆನ್ಸಿಂಗ್ ಪ್ರಮಾಣವು ಹೆಚ್ಚಾದರೆ ಮಾತ್ರ ದೇಶದಲ್ಲಿ ಹರಡುತ್ತಿರುವ ಹೊಸ ರೂಪಾಂತರಿಗಳನ್ನು ಪತ್ತೆ ಮಾಡಲು ಹಾಗೂ ಸಮುದಾಯ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಸಕಾಲದಲ್ಲಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. ಕೊವಿಡ್ ತಪಾಸಣೆಯನ್ನು ಹೆಚ್ಚಿಸಬೇಕು. ಪಾಸಿಟಿವ್ ಬಂದ ಎಲ್ಲ ಮಾದರಿಗಳನ್ನೂ ಜಿನೋಮ್ ಸೀಕ್ವೆನ್ಸಿಂಗ್ಗಾಗಿ ಇನ್ಸಾಕಾಗ್ ಪ್ರಯೋಗಾಲಯಗಳಿಗೆ (lGSLs – INSACOG Genome Sequencing Laboratories) ಕಡ್ಡಾಯವಾಗಿ ಕಳುಹಿಸಿಕೊಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಕಳೆದ ಎರಡು ವಾರಗಳಿಂದ ಚೀನಾದಲ್ಲಿ ಕೊವಿಡ್ ವ್ಯಾಪಕವಾಗಿ ಹರಡುತ್ತಿದ್ದು, ಜಾಗತಿಕ ಆರೋಗ್ಯ ಪರಿಸ್ಥಿತಿ ಹಾಘೂ ಆರ್ಥಿಕತೆಯ ಮೇಲೆ ಮತ್ತೊಂದು ಕಾರ್ಮೋಡ ಕವಿಯುವಂತೆ ಆಗಿದೆ. ಎರಡು ವರ್ಷಗಳಿಂದ ಲಾಕ್ಡೌನ್ ನಿರ್ಬಂಧಗಳ ಮೂಲಕ ಕೊವಿಡ್ ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ತೆಗೆದುಕೊಂಡಿದ್ದ ಚೀನಾ ಸರ್ಕಾರವು, 15 ದಿನಗಳ ಹಿಂದೆ ಏಕಾಏಕಿ ನಿರ್ಬಂಧಗಳನ್ನು ಸಡಿಲಿಸಿತ್ತು. ‘ಚೀನಾದ ವಿದ್ಯಮಾನವು ಈಗ ಇಡೀ ಜಗತ್ತಿಗೆ ಆತಂಕ ತಂದೊಡ್ಡಿದೆ. ವಿಶ್ವದ ಬೃಹತ್ ಆರ್ಥಿಕತೆ ಮತ್ತು ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವ ಚೀನಾದ ಈ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಲಿದೆ’ ಎಂದು ಅಮೆರಿಕ ಎಚ್ಚರಿಸಿದೆ. ಈ ನಡುವೆ ಅಮೆರಿಕದಲ್ಲಿಯೂ ಏಕಾಏಕಿ ಕೊವಿಡ್ ಸಾವುಗಳ ಪ್ರಮಾಣ ಹೆಚ್ಚಾಗಿರುವುದು ಭಾರತ ಸರ್ಕಾರಕ್ಕೆ ಆತಂಕ ಉಂಟು ಮಾಡಿದೆ.