

ನವದೆಹಲಿ : ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಗಡಿ ವಿವಾದ (Maharashtra-Karnataka Border Dispute) ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಇಂದು(ಡಿಸೆಂಬರ್ 14) ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ್ದು, ಸುಪ್ರೀಂಕೋರ್ಟ್ (supreme court) ಆದೇಶವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ ತಟಸ್ಥ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.
ಸಂಸತ್ ಭವನದ ಲೈಬ್ರರಿ ಕಟ್ಟಡದಲ್ಲಿ ಮಹಾರಾಷ್ಟ್ರ, ಕರ್ನಾಟಕ ಮುಖ್ಯಮಂತ್ರಿಗಳ ಜೊತೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ, ಸುಪ್ರೀಂಕೋರ್ಟ್ ಆದೇಶವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದನ್ನು ಎರಡು ರಾಜ್ಯಗಳು ರಾಜಕೀಯ ಚರ್ಚಾ ವಿಷಯವನ್ನಾಗಿ ಮಾಡಬಾರದು. ಸಮಸ್ಯೆ ಬಗೆಹರಿಸಲು ತಟಸ್ಥ ಸಮಿತಿಯನ್ನು ರಚಿಸಲಾಗುವುದು. ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ. ಗಡಿಯಲ್ಲಿ ಶಾಂತಿಯನ್ನು ಸ್ಥಾಪಿಸಬೇಕಿದೆ. ನನಗೆ ವಿಶ್ವಾಸ ಇದೆ, ಎಲ್ಲರೂ ರಾಜಕೀಯ ನಾಯಕರು ಸಹಕರಿಸಲಿದ್ದಾರೆ ಎಂದು ಹೇಳಿದರು.
ಮಹಾರಾಷ್ಟ್ರ, ಕರ್ನಾಟಕ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ. ಗಡಿ ವಿವಾದ ಸಂಬಂಧ ಸುಪ್ರೀಂಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಸಿಎಂಗಳಾದ ಬೊಮ್ಮಾಯಿ, ಏಕನಾಥ್ ಶಿಂಧೆ ಜತೆ ಸುದೀರ್ಘ ಚರ್ಚೆ ಮಾಡಿದ್ದು, ಗಡಿ ವಿವಾದವನ್ನು ರಸ್ತೆಯಲ್ಲಿ ಪರಿಹರಿಸಿಕೊಳ್ಳಲು ಬರುವುದಿಲ್ಲ ಎದು ಹೇಳಿದರು.
ಸಂಸತ್ ಭವನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಭಾಗಿಯಾಗಿದ್ದರು.