

ನವದೆಹಲಿ (ಡಿ.14): ದೆಹಲಿಯ ದ್ವಾರಕಾದಲ್ಲಿ ಶಾಲಾ ಬಾಲಕಿಯ ಮೇಲೆ ಆಸಿಡ್ ಎರಚಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವಿದ್ಯಾರ್ಥಿಯ ಮೇಲೆ ಆಸಿಡ್ ಎರಚಿ ಆರೋಪಿಗಳು ಪರಾರಿಯಾಗಿದ್ದವು. ಈ ವೇಳೆ ಹಲವು ಪೊಲೀಸ್ ತಂಡಗಳು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದವು. ಕೊನೆಗೂ ಸಂಜೆ ವೇಳೆಗೆ ಮೂವರನ್ನು ಬಂಧಿಸಲಾಗಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಮೋಹನ್ ಗಾರ್ಡನ್ ಬಳಿ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ವಿದ್ಯಾರ್ಥಿನಿ 17 ವರ್ಷದವಳಾಗಿದ್ದು, ತನ್ನ ತಂಗಿಯೊಂದಿಗೆ ನಿಂತಿದ್ದಳು. ಆಗ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತೆ ಇಬ್ಬರು ಬಾಲಕರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಕೂಡ ಬಯಲಿಗೆ ಬಂದಿದೆ. ಇದರಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು.
ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಬಂದು ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಿದೆ. ಇಬ್ಬರೂ ಯುವಕರು ಬಟ್ಟೆಯಿಂದ ಮುಖ ಮುಚ್ಚಿಕೊಂಡಿದ್ದರು. ಬಳಿಕ ಯುವಕರಿಬ್ಬರೂ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಸಂತ್ರಸ್ತೆಯ ಒತ್ತಾಯದ ಮೇರೆಗೆ ಆಕೆಯ ತಂಗಿ ಮನೆಗೆ ಹೋಗಿ ಆಕೆಯ ತಂದೆಗೆ ಕರೆ ಮಾಡಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಮಹಿಳಾ ಆಯೋಗ ಮತ್ತು ಮಕ್ಕಳ ಆಯೋಗ ದೆಹಲಿ ಪೊಲೀಸರು ಮತ್ತು ದೆಹಲಿ ಸರ್ಕಾರಕ್ಕೆ ವರದಿ ಕೋರಿ ನೋಟಿಸ್ ಜಾರಿ ಮಾಡಿದೆ. ಇದರೊಂದಿಗೆ ಆ್ಯಸಿಡ್ ಮಾರಾಟ ಮಾಡಿದ ಅಂಗಡಿಯವರ ವಿರುದ್ಧವೂ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.
ಆರೋಪಿಯನ್ನು ಗುರುತಿಸಿದ ಸಹೋದರಿ: ಘಟನೆಯ ವೇಳೆ ಸಂತ್ರಸ್ತೆಯ ಜೊತೆಯಲ್ಲಿದ್ದ ವಿದ್ಯಾರ್ಥಿನಿಯ ಕಿರಿಯ ಸಹೋದರಿ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಗುರುತಿಸಿದ್ದಾರೆ. ನಾವು ಶಾಲೆಗೆ ಹೋಗುವಾಗ ಅಕ್ಕ ಜೋರಾಗಿ ಅಳುತ್ತಿದ್ದಳು. ತಕ್ಷಣವೇ ಅವಳು ತಂದೆಗೆ ಕರೆ ಮಾಡವಂತೆ ಹೇಳಿದ್ದಳು. ಆಕೆಯ ಮುಖವನ್ನು ನೋಡಿದಾಗ ನನಗೆ ಬಹಳ ಭಯವಾಗಿತ್ತು. ತಂದೆಗೆ ಫೋನ್ ಮಾಡಿದ ಬಳಿಕ, ಅಕ್ಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಬೈಕ್‌ನಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಅದರಲ್ಲಿ ನಂಬರ್ ಪ್ಲೇಟ್ ಇದ್ದಿರಲಿಲ್ಲ. ಆದರೆ ಸಿಸಿಟಿವಿ ದೃಶ್ಯದಿಂದ ಇದು ಹನಿ ಹಾಗೂ ಸಚಿನ್ ಎನ್ನುವುದು ಗೊತ್ತಾಗಿತ್ತು. ಇಬ್ಬರಿಗೂ ಅಕ್ಕ ಮೊದಲಿನಿಂದಲೂ ಪರಿಚಯ. ಆದರೆ, ಕೆಲವು ಸಮಸ್ಯೆಗಳು ಉದ್ಭವಿಸಿದ್ದವು. ಆ ಬಳಿಕ ಮಾತುಕತೆ ನಿಂತುಹೋಗಿತ್ತು. ಆದರೆ, ಈ ಇಬ್ಬರೂ ವ್ಯಕ್ತಿಗಳು ನನ್ನ ತಂದೆಯೊಂದಿಗೆ ಸಾಮಾನ್ಯವಾಗಿ ಮಾತನಾಡುತ್ತಿದ್ದರು ಹಾಗೂ ಇಬ್ಬರೂ ಅಕ್ಕ ಓದುತ್ತಿದ್ದ ಶಾಲೆಯವರಲ್ಲ ಎಂದು ಹೇಳಿದ್ದಾರೆ.
ವಿದ್ಯಾರ್ಥಿನಿ ಸ್ಥಿತಿ ಸ್ಥಿರ: ವಿದ್ಯಾರ್ಥಿನಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ವಿದ್ಯಾರ್ಥಿನಿಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿನಿಯ ಆರೋಗ್ಯದ ಬಗ್ಗೆ ಆಸ್ಪತ್ರೆಯ ವೈದ್ಯರು ಹೆಚ್ಚಿನ ಮಾಹಿತಿ ನೀಡಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ವಿದ್ಯಾರ್ಥಿನಿಯ ಎರಡೂ ಕಣ್ಣುಗಳಲ್ಲಿ ಆಸಿಡ್ ಹೋಗಿದೆ ಎಂದು ಹೇಳಲಾಗಿದೆ.