

ಕತಾರ್‌ನಲ್ಲಿ ನಡೆಯುತ್ತಿರುವ ಫುಟ್‌ಬಾಲ್ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಅರ್ಜೆಂಟೀನಾ ಎಂಟು ವರ್ಷಗಳ ನಂತರ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸೆಮಿಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿದ ಅರ್ಜೆಂಟೀನಾ 6ನೇ ಬಾರಿಗೆ ಫಿಪಾ ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಇದಕ್ಕೂ ಮೊದಲು 2014ರಲ್ಲಿ ಅರ್ಜೆಂಟೀನಾ ಫೈನಲ್ ತಲುಪಿತ್ತಾದರೂ ಅಲ್ಲಿ ಜರ್ಮನಿ ವಿರುದ್ಧ ಸೋತು ಚಾಂಪಿಯನ್ ಪಟ್ಟಕ್ಕೇರುವ ಅವಕಾಶವನ್ನು ಕಳೆದುಕೊಂಡಿತ್ತು. ಈ ಗೆಲುವಿನೊಂದಿಗೆ ಅರ್ಜೆಂಟೀನಾ ವಿಶ್ವಕಪ್ ಇತಿಹಾಸದಲ್ಲಿ ಆರನೇ ಬಾರಿಗೆ ಫೈನಲ್ಗೇರಿದ ಸಾಧನೆ ಮಾಡಿದೆ. ಈಗ ಡಿಸೆಂಬರ್ 18 ರಂದು ನಡೆಯಲಿರುವ ಫೈನಲ್‌ನಲ್ಲಿ, ಫ್ರಾನ್ಸ್ ಅಥವಾ ಮೊರಾಕೊ ನಡುವಿನ ಸೆಮಿಫೈನಲ್ ಪಂದ್ಯದ ವಿಜೇತ ತಂಡ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.

ಲಿಯೋನೆಲ್ ಮೆಸ್ಸಿಯನ್ನ ಅದ್ಭುತ ಆಟದಿಂದ ಅರ್ಜೆಂಟೀನಾ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಎರಡನೇ ಬಾರಿಗೆ ಫೈನಲ್ ಆಡಲಿದೆ. ಇದಕ್ಕೂ ಮೊದಲು 2014 ರಲ್ಲಿ, ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ಫೈನಲ್‌ನಲ್ಲಿ ಜರ್ಮನಿ ಎದುರು ಸೋತಿದ್ದರಿಂದ ಪ್ರಶಸ್ತಿ ಎತ್ತಿಹಿಡಿಯಲು ಸಾಧ್ಯವಾಗಿರಲಿಲ್ಲ.
ಮೆಸ್ಸಿ ಅದ್ಭುತ ಪ್ರದರ್ಶನ
ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೆಸ್ಸಿ ಅದ್ಭುತ ಪ್ರದರ್ಶನ ನೀಡಿ, ಪಂದ್ಯದ 34ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಮೆಸ್ಸಿ ಯಶಸ್ವಿಯಾದರು. ಈ ಮೂಲಕ ತಂಡಕ್ಕೆ ಮೊದಲ ಗೋಲು ದಾಖಲಿಸಿದರು. ಇದಾದ ಬಳಿಕ ಜೂಲಿಯನ್ ಅಲ್ವಾರೆಜ್ 39ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿದರು.ನಂತರ, ಆಟದ 69 ನೇ ನಿಮಿಷದಲ್ಲಿ, ಜೂಲಿಯಾನ್ ಅಲ್ವಾರೆಜ್ ಮತ್ತೊಂದು ಗೋಲು ಬಾರಿಸುವ ಮೂಲಕ ಕ್ರೊಯೇಷಿಯಾ ತಂಡವನ್ನು ಪಂದ್ಯದಿಂದಲೇ ಹೊರಹಾಕಿದರು.
ಅರ್ಜೆಂಟೀನಾ ಫೈನಲ್ ಇತಿಹಾಸ
ಫಿಫಾ ವಿಶ್ವಕಪ್‌ನಲ್ಲಿ ಇದುವರೆಗೆ ಆರು ಬಾರಿ ಬಾರಿ ಫೈನಲ್‌ಗೆ ಎಂಟ್ರಿಕೊಟ್ಟಿರುವ ಅರ್ಜೆಂಟೀನಾ ಹಲವು ಏರುಪೇರುಗಳನ್ನು ಕಂಡಿದೆ. 1930 ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದ್ದ ಅರ್ಜೆಂಟೀನಾ, ಆ ಪಂದ್ಯದಲ್ಲಿ ಉರುಗ್ವೆ ವಿರುದ್ಧ ಸೋತು ಪ್ರಶಸ್ತಿ ಕೈಚೆಲ್ಲಿತ್ತು. ನಂತರ 1978 ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಮಣಿಸಿದ ಅರ್ಜೆಂಟೀನಾ ಮೊದಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದಿತ್ತು. ಅದರ ನಂತರ 1986 ರಲ್ಲಿ ಫೈನಲ್ ಆಡಿದ್ದ ಅರ್ಜೆಂಟೀನಾ, ಪಶ್ಚಿಮ ಜರ್ಮನಿಯನ್ನು 3-2 ಗೋಲುಗಳಿಂದ ಸೋಲಿಸಿ ಮತ್ತೊಮ್ಮೆ ಪ್ರಶಸ್ತಿ ಬಾಚಿಕೊಂಡಿತ್ತು. 1990 ರಲ್ಲಿ ಮತ್ತೊಮ್ಮೆ ಫೈನಲ್‌ಗೆ ಪ್ರವೇಶಿಸಿದ್ದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು 1-0 ಗೋಲುಗಳಿಂದ ಸೋಲಿಸುವುದರೊಂದಿಗೆ ಪಶ್ಚಿಮ ಜರ್ಮನಿ ಚಾಂಪಿಯನ್ ಪಟ್ಟಕ್ಕೇರಿತ್ತು. 1990 ರ ನಂತರ 2014 ರಲ್ಲಿ ಅಂದರೆ ಬರೋಬ್ಬರಿ 24 ವರ್ಷಗಳ ಬಳಿಕ ಫೈನಲ್‌ಗೆ ಲಗ್ಗೆ ಇಟ್ಟಿದ್ದ ಅರ್ಜೆಂಟೀನಾ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಜರ್ಮನಿ ವಿಶ್ವ ಸಾಮ್ರಾಟನಾಗಿ ಮೆರೆದಾಡಿತ್ತು.
ಈ ಗೆಲುವಿನೊಂದಿಗೆ ಅರ್ಜೆಂಟೀನಾ ಕಳೆದ ವಿಶ್ವಕಪ್‌ನಲ್ಲಿ ಕ್ರೊಯೇಷಿಯಾ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡಿದೆ. ರಷ್ಯಾದಲ್ಲಿ ನಡೆದ 2018 ರ ವಿಶ್ವಕಪ್‌ನ ಗುಂಪು ಸುತ್ತಿನಲ್ಲಿ ಕ್ರೊಯೇಷಿಯಾ ಅರ್ಜೆಂಟೀನಾವನ್ನು 3-0 ಗೋಲುಗಳಿಂದ ಸೋಲಿಸಿತ್ತು. ವಿಶ್ವಕಪ್‌ನಲ್ಲಿ ಕ್ರೊವೇಷಿಯಾ ವಿರುದ್ಧದ ಮೂರು ಪಂದ್ಯಗಳಲ್ಲಿ ಅರ್ಜೆಂಟೀನಾ ತಂಡ ಇದುವರೆಗೆ ಎರಡು ಬಾರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ