

ಮಂಗಳೂರು: ನಗರದಲ್ಲಿ ಕುಡುಕನೊಬ್ಬನಿಗೆ (Drunkar) ಕಂತೆ ಕಂತೆ ನೋಟು (Money) ಒಲಿದು ಬಂದಿದ್ದರೂ, ಅರ್ಧಗಂಟೆಯಲ್ಲಿ ಆ ಹಣದೊಂದಿಗೆ ಕುಡುಕ ಪೊಲೀಸ್ ಠಾಣೆ ಸೇರುವಂತಾಗಿದೆ. ಕುಡಿತದ ಚಟವೇ ಆತನನ್ನು ಮೂರು ದಿನಗಳ ಕಾಲ ಠಾಣೆಯಲ್ಲೇ ಕೊಳೆಯುವಂತೆ ಮಾಡಿದೆ. ಹತ್ತು ಲಕ್ಷ ರೂಪಾಯಿಯ (10 Lakh) ಕಂತೆ ಕಂತೆ ನೋಟುಗಳ ಬಂಡಲ್‍ನ್ನು ಕುಡುಕ ಇದೀಗ ಕಳೆದುಕೊಂಡಿದ್ದಾನೆ.

ಮಂಗಳೂರಿನ (Mangaluru) ರಸ್ತೆ ಬದಿಯಲ್ಲಿ ಕುಡುಕನಿಗೆ ಸಿಕ್ಕಿದ 10 ಲಕ್ಷ ರೂಪಾಯಿ ಹತ್ತೇ ನಿಮಿಷದಲ್ಲಿ ಪೊಲೀಸರ ಪಾಲಾದ ಕಥೆ ಇದು. ಕಳೆದ ನ.27 ರಂದು ಮಂಗಳೂರಿನ ಪಂಪ್‍ವೆಲ್ (Pumpwell) ಬಳಿ ಶಿವರಾಜ್ ಎಂಬಾತ ಅಲ್ಲಿಯೇ ಸಮೀಪದ ವೈನ್‍ಶಾಪ್‍ನಲ್ಲಿ ಮದ್ಯ ಸೇವಿಸಿ ಹೊರಗಡೆ ನಿಂತಿದ್ದ. ಆಗ ಹೊರಗಡೆ ಬೈಕ್ ಪಾರ್ಕಿಂಗ್ ಸ್ಥಳದಲ್ಲಿ ಚೀಲವೊಂದು ಅನಾಥವಾಗಿ ಬಿದ್ದಿತ್ತು. ಇದನ್ನು ಶಿವರಾಜ್ ಹಾಗೂ ಮತ್ತೋರ್ವ ಕೂಲಿ ಕಾರ್ಮಿಕ ನೋಡಿದ್ದರು. ತಕ್ಷಣ ಶಿವರಾಜ್ ಚೀಲವನ್ನು ಎತ್ತಿ ನೋಡಿದಾಗ 500 ಹಾಗೂ 2,000 ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟುಗಳು ಕಂಡು ಬಂದಿದೆ. ಇಬ್ಬರೂ ಒಂದು ಕ್ಷಣಕ್ಕೆ ನೋಟುಗಳ ಬಂಡಲ್ ನೋಡಿ ದಂಗಾಗಿದ್ದರು. ನೋಟುಗಳ ಕಂತೆ ಕಂಡಿದ್ದೇ ಮತ್ತೆ ಮದ್ಯ ಕುಡಿಯುವ ಸೆಳೆತಕ್ಕೊಳಗಾಗಿ, ಬಂಡಲ್‍ನಿಂದ ಎರಡು ನೋಟು ಎಳೆದು ಮತ್ತೆ ವೈನ್‍ಶಾಪ್‍ಗೆ ಕಾಲಿಟ್ಟಿದ್ದಾರೆ. ಬಳಿಕ ಹೊರ ಬಂದ ಇಬ್ಬರೂ ಅನತಿ ದೂರ ಸಾಗಿದ್ದು ಆಗ ಕೂಲಿ ಕಾರ್ಮಿಕ ತನಗೇನು ಇಲ್ಲವೇ ಎಂದಾಗ 2,000 ಮತ್ತು 500 ರೂ. ಮುಖಬೆಲೆಯ ಬಂಡಲ್‍ನ್ನು ಶಿವರಾಜ್ ಆತನ ಕೈಗೆ ನೀಡಿದ್ದಾನೆ. ಉಳಿದ ನೋಟುಗಳ ಕಂತೆಯನ್ನು ಹಿಡಿದು ಮುಂದಕ್ಕೆ ಹೋದ ಶಿವರಾಜ್ ಮತ್ತೆ ವೈನ್‍ಶಾಪ್‍ಗೆ ನುಗ್ಗಿ ಕಂಠಪೂರ್ತಿ ಮದ್ಯ ಇಳಿಸಿದ್ದಾನೆ.
ಇಷ್ಟಕ್ಕೇ ಕಥೆ ಮುಗಿದಿಲ್ಲ, ಅಲ್ಲಿಂದ ಹೊರ ಬರುವಾಗ ಕಂಕನಾಡಿ ಠಾಣಾ ಪೊಲೀಸರು (Police) ತಯಾರಾಗಿ ನಿಂತಿದ್ದು, ಈತನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ತಾನು ಒಂದು ಬಂಡಲ್ ಹಣವನ್ನು ಕೂಲಿ ಕಾರ್ಮಿಕನಿಗೆ ನೀಡಿದ್ದನ್ನು ಆತ ತಿಳಿಸಿದ್ದಾನೆ. ಆದರೆ ಆತನನ್ನು ಹುಡುಕಾಡಿದರೂ ಈವರೆಗೆ ಪತ್ತೆಯಾಗಿಲ್ಲ. ಇದೀಗ ಹಣ ಕಂಕನಾಡಿ ಠಾಣೆಯಲ್ಲಿದೆ. ಆದರೆ ಪೊಲೀಸರು ಯಾವುದೇ ದೂರು ದಾಖಲಿಸದೆ ಶಿವರಾಜ್‍ನನ್ನು ಮೂರು ದಿನಗಳ ಕಾಲ ಠಾಣೆಯಲ್ಲಿರಿಸಿ ಇದೀಗ ಬಿಟ್ಟು ಕಳುಹಿಸಿದ್ದಾರೆ. ವಾರಿಸುದಾರರಿಲ್ಲದ ಹತ್ತು ಲಕ್ಷ ರೂಪಾಯಿ ಏನಾಗಿದೆ ಅನ್ನೋದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ.
ಮೂಲಗಳ ಮಾಹಿತಿಯ ಪ್ರಕಾರ ಈ ಹಣ ಅಡಿಕೆ ವ್ಯಾಪರಸ್ಥರಿಗೆ ಸೇರಿದ್ದಾಗಿದ್ದು, ಹಣ ಕಳೆದು ಹೋದ ದಿನದಂದೇ ಕಂಕನಾಡಿ ಪೊಲೀಸ್ ಠಾಣೆಗೆ ತೆರಳಿ ಹಣ ನಾಪತ್ತೆಯಾದ ಬಗ್ಗೆ ಪೊಲೀಸರ ಬಳಿ ಹೇಳಿದ್ದರು. ಆದರೆ ಪೊಲೀಸರು ಇದು ನಿಮ್ಮ ಹಣ ಅಲ್ಲ ಅಂತಾ ಹಿಂದೆ ಕಳುಹಿಸಿದ್ದರು. ಹತ್ತು ಲಕ್ಷ ರೂಪಾಯಿ ಇರಲಿಲ್ಲ. ಇದ್ದದ್ದು 49 ಸಾವಿರ ರೂಪಾಯಿ ಮಾತ್ರ ಅನ್ನೋದು ಪೊಲೀಸರ ವಾದವಾಗಿದೆ. ಆದರೂ ದೂರು ದಾಖಲಾಗಿಲ್ಲ. ಈವರೆಗೆ ಪೊಲೀಸರು ಪ್ರಕರಣವನ್ನೂ ದಾಖಲಿಸಿಲ್ಲ ಅನ್ನೋದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.