

2022 ರ ಫಿಫಾ ವಿಶ್ವಕಪ್‌ನ C ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಮೆಕ್ಸಿಕೋ ತಂಡವನ್ನು 0-2 ಅಂತರದಿಂದ ಮಣಿಸಿದ ಅರ್ಜೆಂಟೀನಾ ಗೆಲುವಿನ ಲಯಕ್ಕೆ ಮರಳಿದೆ. ಆಡಿದ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋತಿದ್ದ ಅರ್ಜೆಂಟೀನಾಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತ್ತಾಗಿತ್ತು. ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಅರ್ಜೆಂಟೀನಾ ತಂಡಕ್ಕೆ ನಾಯಕ ಮೆಸ್ಸಿ ಆಟ ಅದ್ಭುತ ಗೆಲುವು ತಂದುಕೊಟ್ಟಿತು.

ಈ ಪಂದ್ಯದಲ್ಲಿ ಮೆಕ್ಸಿಕೊವನ್ನು ಸೋಲಿಸಿದ ಅರ್ಜೆಂಟೀನಾ ವಿಶ್ವಕಪ್ ಪ್ರಯಾಣವನ್ನು ಜೀವಂತವಾಗಿರಿಸಿಕೊಂಡರೆ, ಈ ಗೆಲುವಿನಲ್ಲಿ ನಾಯಕ ಮೆಸ್ಸಿ ವಿಶೇಷ ದಾಖಲೆಯೊಂದನ್ನು ಸರಿಗಟ್ಟಿದರು. ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅರ್ಜೆಂಟೀನಾ ಪರವಾಗಿ ಮರಡೋನಾ ಹೆಸರಿನಲ್ಲಿದ್ದ ದಾಖಲೆಯನ್ನು ಮೆಸ್ಸಿ ಸರಿಗಟ್ಟಿದರು.

ಮೆಸ್ಸಿ, ಮೊದಲು ಮೆಕ್ಸಿಕೋ ವಿರುದ್ಧ ಮೈದಾನಕ್ಕಿಳಿಯುವ ಮೂಲಕ ಅರ್ಜೆಂಟೀನಾ ಪರ 21 ವಿಶ್ವಕಪ್ ಪಂದ್ಯಗಳನ್ನು ಆಡಿದ ಮರಡೋನಾ ಅವರ ದಾಖಲೆಯನ್ನು ಸರಿಗಟ್ಟಿದರು. ಇದರ ನಂತರ, ಅವರು ಅದೇ ಪಂದ್ಯದಲ್ಲಿ ತಮ್ಮ 8 ನೇ ವಿಶ್ವಕಪ್ ಗೋಲು ಗಳಿಸಿದರು. ಇದಕ್ಕೂ ಮುನ್ನ ಡಿಯಾಗೋ ಮರಡೋನಾ ಅರ್ಜೆಂಟೀನಾ ಪರ 8 ವಿಶ್ವಕಪ್ ಗೋಲು ಗಳಿಸಿದ್ದ ಸಾಧನೆ ಮಾಡಿದ್ದರು

ಪಂದ್ಯದ ದ್ವಿತೀಯಾರ್ಧದ 64ನೇ ನಿಮಿಷದಲ್ಲಿ ಮೆಸ್ಸಿ ಗೋಲು ಬಾರಿಸಿದರೆ, 87ನೇ ನಿಮಿಷದಲ್ಲಿ ಎಂಜೊ ಫೆರ್ನಾಂಡಿಸ್ ಗೋಲು ಬಾರಿಸುವುದರೊಂದಿಗೆ ತಂಡದ ಮುನ್ನಡೆಯನ್ನು 2-0ಗೆ ಏರಿಸಿದರು. ಈ ವಿಶ್ವಕಪ್‌ನಲ್ಲಿ ಫೆರ್ನಾಂಡಿಸ್ ಅವರ ಮೊದಲ ಗೋಲು ಇದಾಗಿತ್ತು.
ಮೆಕ್ಸಿಕೋ ವಿರುದ್ಧದ ಈ ಪಂದ್ಯದಲ್ಲಿ ಅರ್ಜೆಂಟೀನಾ 2-0 ಅಂತರದಲ್ಲಿ ಜಯ ಸಾಧಿಸಿತ್ತು. ಈ ಗೆಲುವಿಗಾಗಿ ಮೆಸ್ಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು