

ಶಿವಮೊಗ್ಗ: ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿ ಮಾಡೋ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪುನರುಚ್ಚರಿಸಿದ್ದಾರೆ.
ಬಿಜೆಪಿಯ (BJP) ಪ್ರಮುಖ ಅಜೆಂಡಾಗಳಲ್ಲಿ ಒಂದಾದ ಏಕರೂಪ ನಾಗರಿಕ ಸಂಹಿತೆಯನ್ನು ದೇಶಾದ್ಯಂತ ಬಿಡಿಬಿಡಿಯಾಗಿ ಜಾರಿಗೆ ತರುವ ಪ್ರಯತ್ನಗಳು ಆರಂಭವಾದಂತೆ ಕಾಣುತ್ತಿದೆ. ಇತ್ತೀಚಿಗೆ ಮುಗಿದ ಹಿಮಾಚಲ ಪ್ರದೇಶ ಚುನಾವಣೆ ವೇಳೆಯೂ ಬಿಜೆಪಿ ಏಕರೂಪ ನಾಗರಿಕ ಸಂಹಿತೆ ಜಾರಿಗಾಗಿ ಸಮಿತಿ ರಚಿಸಿತ್ತು. ಇದೀಗ ಕರ್ನಾಟಕದಲ್ಲಿಯೂ ಬಿಜೆಪಿ, ಏಕರೂಪ ನಾಗರಿಕ ಸಂಹಿತೆ ಜಾರಿಯ ಜಪ ಶುರು ಮಾಡಿಕೊಂಡಿದೆ.
ಶಿವಮೊಗ್ಗದಲ್ಲಿ ನಿನ್ನೆಯಷ್ಟೇ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಸುಳಿವು ನೀಡಿದ್ದ ಸಿಎಂ, ಇವತ್ತು ಕೂಡ ಅದೇ ಜಪ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡೋ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.
ಎಲೆಕ್ಷನ್ ಸಮೀಪಿಸಿದಂತೆ ಇದಕ್ಕೆ ಮತ್ತಷ್ಟು ಸ್ಪಷ್ಟರೂಪ ಸಿಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಏಕರೂಪ ನಾಗರಿಕ ಸಂಹಿತೆ ಜಾರಿ ವಿರೋಧಿಸುವ ಬಗ್ಗೆ ಕಾಂಗ್ರೆಸ್‍ನಲ್ಲಿ ಚರ್ಚೆಗಳು ನಡೆದಿವೆ. ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಬಿಜೆಪಿಯವರು, ಏಕರೂಪ ನಾಗರಿಕ ಸಂಹಿತೆ ಹೆಸರಲ್ಲಿ ಈಗ ಸಂವಿಧಾನ ತಿರುಚಲು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರು ವಾಗ್ದಾಳಿ ನಡೆಸಿದ್ದಾರೆ.