

ಗಾಂಧಿನಗರ: ದೇಶದಲ್ಲೇ ನೀವು ಅಪಖ್ಯಾತಿ ಹೊಂದಿದ್ದೀರಿ. ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi), ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಭರಾಟೆ ಜೋರಾಗಿದೆ. ಬಿಜೆಪಿ ಕೇಂದ್ರ ಸಚಿವ ಅಮಿತ್ ಶಾ (Amit Shah) ಕಾಂಗ್ರೆಸ್ (Congress) ವಿರುದ್ಧ ಸತತವಾಗಿ ಹರಿಹಾಯುತ್ತಿದ್ದಾರೆ. ಶುಕ್ರವಾರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ `2002ರಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದ ಶಕ್ತಿಗಳಿಗೆ ಬಿಜೆಪಿ (BJP) ತಕ್ಕ ಪಾಠ ಕಲಿಸಿತು’ ಎಂದಿದ್ದ ಶಾ ಹೇಳಿಕೆ ವಿರುದ್ಧ ಓವೈಸಿ ಕಿಡಿಕಾರಿದ್ದಾರೆ.
ಗುಜರಾತಿನ ಜುಹಾಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಅಮಿತ್ ಶಾ ಅವರೇ ನಮಗೆ ಏನು ಪಾಠ ಕಲಿಸಿದ್ದೀರಿ? ಬಿಲ್ಕಿಸ್‌ನ ಅತ್ಯಾಚಾರಿಗಳನ್ನು ಬಿಡುಗಡೆ ಮಾಡೋದು ಪಾಠವೇ? ಬಿಲ್ಕಿಸ್‌ನ 3 ವರ್ಷದ ಮಗಳನ್ನು ಕಣ್ಣೆದುರೇ ಹೊಡೆದು ಕೊಂದವರನ್ನು ಬಿಡುಗಡೆ ಮಾಡುವುದು ಪಾಠವೇ? ಎಹ್ಸಾನ್ ಜಾಫ್ರಿ ಕೊಲ್ಲುವಂತಹ ಪಾಠ ಕಲಿಸಿದ್ದೀರಿ, ಇವೆಲ್ಲವೂ ಪಾಠವೇ? ಇಡೀ ದೇಶದಲ್ಲಿ ನೀವು ಅಪಖ್ಯಾತಿ ಹೊಂದಿದ್ದೀರಿ. ದೆಹಲಿಯಲ್ಲಿ ಕೋಮುಗಲಭೆಗಳು ನಡೆಯುತ್ತಿವೆ. ನೀವು ಯಾವ ಪಾಠ ಕಲಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
2022ರ ಕೋಮು ದ್ವೇಷದಿಂದ ಬೆಸ್ಟ್ ಬೇಕರಿಯನ್ನು ಸುಟ್ಟುಹಾಕಲಾಯಿತು. ಅದು ಸಾವಿರಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತು. `ಮಿಸ್ಟರ್ ಅಮಿತ್ ಶಾ ಅವರೇ, ನಿಮ್ಮ ಇಂತಹ ಎಷ್ಟು ಪಾಠಗಳನ್ನು ನಾವು ನೆನಪಿನಲ್ಲಿಟ್ಟುಕೊಂಡಿದ್ದೇವೆ. ನಿಮ್ಮಿಂದ ಪಾಠ ಕಲಿಯೋದು ಏನೂ ಇಲ್ಲ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಿದಾಗ ಮಾತ್ರ ನಿಜವಾದ ಶಾಂತಿ ಬಲಗೊಳ್ಳುತ್ತದೆ ಎಂದು ಸಲಹೆ ನೀಡಿದ್ದಾರೆ.
ಅಧಿಕಾರದ ಅಮಲಿನಲ್ಲಿ ಇಂದು ಗೃಹ ಸಚಿವರು ನಾವು ತಕ್ಕ ಪಾಠ ಕಲಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಅಧಿಕಾರ ಯಾವತ್ತೋ ಒಬ್ಬರ ಬಳಿಯೇ ಇರಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕುಟುಕಿದ್ದಾರೆ.