

ಬದಿಯಡ್ಕ: ಡಾ| ಕೃಷ್ಣಮೂರ್ತಿ ಸರ್ಪಂಗಳ ಅವರ ನಿಗೂಢ ಸಾವಿನ ಕುರಿತು ಬದಿಯಡ್ಕ ಮತ್ತು ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದು, ಐವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವೈದ್ಯರು ನಾಪತ್ತೆಯಾಗುವ ಮುನ್ನ ಬದಿಯಡ್ಕದಲ್ಲಿ ನಡೆದ ಘಟನೆಗಳ ಬಗ್ಗೆ ಬದಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ವೈದ್ಯರ ಮೃತದೇಹ ಪತ್ತೆಯಾದ ಕುಂದಾಪುರ ಠಾಣೆ ವ್ಯಾಪ್ತಿಯಲ್ಲೂ ತನಿಖೆ ನಡೆಯುತ್ತಿದೆ. ಬದಿ ಯಡ್ಕದಲ್ಲಿರುವ ಕ್ಲಿನಿಕ್‌ಗೆ ನುಗ್ಗಿದ ತಂಡ ವೈದ್ಯರಿಗೆ ಬೆದರಿಕೆ ಒಡ್ಡಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ಆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿ ಅಶ್ರಫ್ ಕುಂಬಾxಜೆ (42), ಮುಹಮ್ಮದ್ ಶಿಹಾಬುದ್ದೀನ್ (39) ಉಮರುಲ್ ಫಾರೂಕ್ (42), ಮುಹಮ್ಮದ್ ಹನೀಫ್ ಯಾನೆ ಅನ್ವರ್ (39) ಮತ್ತು ಆಲಿ ತುಪ್ಪೆಕಲ್ಲು (40) ಅವರನ್ನು ಬದಿಯಡ್ಕ ಪೊಲೀಸರು ಬಂಧಿಸಿ ಕ್ಲಿನಿಕ್‌ಗೆ ಅಕ್ರಮ ಪ್ರವೇಶ, ಬೆದರಿಕೆ, ಆತ್ಮಹತ್ಯೆಗೆ ಪ್ರೇರಣೆ ಪ್ರಕರಣ ದಾಖಲಿಸಿದ್ದರು. ವೈದ್ಯರು ಕುಂದಾಪುರ ಬಳಿ ರೈಲು ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದರ ಹಿಂದೆ ನಿಗೂಢತೆಗಳಿವೆ ಎನ್ನಲಾಗುತ್ತಿದೆ.
ನ. 8ರಂದು ಬೆಳಗ್ಗೆ 11 ಗಂಟೆಗೆ ಮಹಿಳೆಯೊಬ್ಬಳು ತಪಾಸಣೆಗೆಂದು ಕ್ಲಿನಿಕ್‌ಗೆ ಬಂದಿದ್ದಳು. ವೈದ್ಯರು ಆಕೆ ಯೊಂದಿಗೆ ಅನುಚಿತವಾಗಿ ವರ್ತಿಸಿ ದರೆಂದು ಆರೋಪಿಸಿ ತಂಡವೊಂದು ಬಂದು ವೈದ್ಯರಿಗೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿರುವುದಾಗಿ ಆರೋಪ ಕೇಳಿ ಬಂದಿದೆ. ಈ ಘಟನೆಯ ಬಳಿಕ ವೈದ್ಯರು ನಾಪತ್ತೆಯಾಗಿದ್ದರು. ಪತ್ನಿ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಇದೇ ವೇಳೆ ಕುಂಬಳೆಯಲ್ಲಿ ಅವರ ಬೈಕ್ ಪತ್ತೆಯಾಗಿತ್ತು. ಅನಂತರ ಕುಂದಾಪುರ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆಯ ರೈಲು ಹಳಿಯಲ್ಲಿ ವೈದ್ಯರ ಮೃತದೇಹ ಪತ್ತೆಯಾಗಿತ್ತು. ಅವರು ಹೇಗೆ ಕುಂದಾಪುರಕ್ಕೆ ತಲುಪಿದ್ದಾರೆಂದು ತಿಳಿದು ಬಂದಿಲ್ಲ. ಆತ್ಮಹತ್ಯೆಗೈಯುವುದಾದರೆ ಅಷ್ಟು ದೂರಕ್ಕೆ ಯಾಕಾಗಿ ಹೋಗಿದ್ದಾರೆ ಎಂಬ ಸಂಶಯ ಸೃಷ್ಟಿಯಾಗಿದೆ. ಕುಂದಾಪುರ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ.
ಕೊಲೆ: ಬಿಜೆಪಿ ಆರೋಪ
ಡಾ| ಕೃಷ್ಣಮೂರ್ತಿ ಸಾವು ಸಂಭವಿಸಿರುವುದು ಆತ್ಮಹತ್ಯೆ ಯಿಂದಲ್ಲ. ಬದಲಾಗಿ ಕೊಲೆ ಯಾಗಿದೆ ಎಂದು ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ. ಶ್ರೀಕಾಂತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಬದಿಯಡ್ಕ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ವೈದ್ಯರು ಮಾನಹಾನಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಪ್ರಚಾರ ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.