

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಕಟಿಸಿದ ಪ್ರಕರಣದಲ್ಲಿ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ರವರಿಗೆ ಜಾಮೀನು ರಹಿತ ವಾರೆಂಟ್ ಹೊರಡಿಸುವಂತೆ ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ.
ಪ್ರಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಮೇಲೆ ಎನ್ಐಎ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಎಸ್ಡಿಪಿಐ ಪಕ್ಷದ ಮೇಲೆಯೂ ಸುವರ್ಣ ನ್ಯೂಸ್ ಆಧಾರ ರಹಿತ ಸುದ್ದಿ ಪ್ರಸಾರ ಮಾಡಿದೆ ಎಂದು ಆರೋಪಿಸಿ ಮೈಸೂರಿನಲ್ಲಿ ಚಾನೆಲ್ ಸಂಪಾದಕರಾದ ರವಿ ಹೆಗ್ಡೆ ಮತ್ತು ಅಜಿತ್ ಹನುಮಕ್ಕನವರ್ ವಿರುದ್ಧ ದೂರು ದಾಖಲಾಗಿತ್ತು.
ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅವರ ಪರ ವಕೀಲರು ವಿನಾಯಿತಿ ಕೋರಿ ಸಿಆರ್ಪಿಸಿ ಸೆಕ್ಷನ್ 205ರ ಅಡಿ ಸಲ್ಲಿಸಿದ್ದ ಅರ್ಜಿಯನ್ನು ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ದೂರುದಾರರ ಪರ ವಕೀಲರು ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸುವಂತೆ ಕೋರಿ ಮೆಮೊ ಸಲ್ಲಿಸಿದ್ದಾರೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ಮುಂದೂಡಿದೆ.
ಈ ಹಿಂದೆಯೂ ಪ್ರೊ.ಭಗವಾನ್ರವರ ಕುರಿತು ಮಾತನಾಡುವಾಗ ಪ್ರವಾದಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಅಜಿತ್ ಹನುಮಕ್ಕರ್ ವಿರುದ್ಧ ರಾಜ್ಯಾದ್ಯಂತ ಹಲವಾರು ಕಡೆ ನೂರಾರು ದೂರು ದಾಖಲಾಗಿದ್ದವು. ಆನಂತರ ಅವರು ಕ್ಷಮೆ ಸಹ ಕೇಳಿದ್ದರು