

ಗುಜರಾತ್‌ನ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಶತಮಾನದಷ್ಟು ಹಳೆಯದಾದ ತೂಗು ಸೇತುವೆ ಕುಸಿದು ಅಪಾರ ಸಾವು- ನೋವುಗಳು ಸಂಭವಿಸಿದವು. ಈ ಘಟನೆಯಲ್ಲಿ ನೀರಿನಲ್ಲಿ ಮುಳುಗಿದವರನ್ನು ರಕ್ಷಿಸಿದ ಮುಸ್ಲಿಂ ಈಜುಗಾರರು ಗಮನ ಸೆಳೆದಿದ್ದಾರೆ. ಸುಮಾರು 80ಕ್ಕೂ ಹೆಚ್ಚು ಜನರನ್ನು ಉಳಿಸಿದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಜನರನ್ನು ಕಾಪಾಡಿದ ಹುಸೇನ್ ಮೆಹಬೂಬ್ ಪಠಾಣ್, ತೌಫೀಕ್, ಸದ್ದಾಂ ಮತ್ತು ನಯೀಮ್ ಅವರಿಗೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.
ಮುರಿದುಬಿದ್ದ ಸೇತುವೆಯಲ್ಲಿ ಸಾವು ಬದುಕಿನ ಜೊತೆ ಹೋರಾಡುತ್ತಿರುವ ಜನರನ್ನು ರಕ್ಷಿಸಲು ಹುಸೇನ್‌ಗೆ ಸಂಜೆ 6 ಗಂಟೆ ಸುಮಾರಿಗೆ ಕರೆ ಬಂತು. ಪರಿಣಿತ ಈಜುಗಾರನಾಗಿದ್ದ ಹುಸೇನ್ ಸ್ಥಳಕ್ಕೆ ಧಾವಿಸಿ ತನ್ನ ಸುರಕ್ಷತೆಯ ಬಗ್ಗೆ ಚಿಂತಿಸದೆ ಸುಮಾರು 50 ಜನರನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಲು ಸಹಾಯ ಮಾಡಿದನು ಎಂದು ‘ಇಂಡಿಯಾ ಟುಮಾರೋ’ ಸುದ್ದಿ ಜಾಲತಾಣ ವರದಿ ಮಾಡಿದೆ.
ಹುಸೇನ್ ಪಠಾಣ್ ಸುಮಾರು 50 ಜೀವಗಳನ್ನು ಉಳಿಸಿದ್ದಾರೆ. “ಸಂಜೆ 6 ಗಂಟೆ ಸುಮಾರಿಗೆ ನನಗೆ ಕರೆ ಬಂತು, ಸೇತುವೆ ಕುಸಿದಿದೆ. ಜನರು ಮುಳುಗುತ್ತಿದ್ದಾರೆ ಎಂಬ ಮಾಹಿತಿ ಬಂತು. ನಾನು ಪರಿಣಿತ ಈಜುಗಾರನಾಗಿದ್ದೇನೆ. ನೀರಿಗೆ ಹಾರಿ ಸಣ್ಣ ಮಕ್ಕಳು, ಗರ್ಭಿಣಿಯರು ಮತ್ತು ಇತರರು ಸೇರಿದಂತೆ ಸುಮಾರು 50 ಜನರನ್ನು ಉಳಿಸಿದೆ. ಸೇತುವೆಯ ಮೇಲೆ ಸುಮಾರು 700 ಜನರಿದ್ದರು ಎಂದು ನಾನು ಕೇಳಿದೆ. ಈ ಸೇತುವೆ ಬಳಿ ಹೋಗಿ ಸುಮಾರು ಏಳು ತಿಂಗಳಾಗಿತ್ತು. ಸಾಧ್ಯವಾದಷ್ಟು ಜೀವಗಳನ್ನು ಉಳಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನ ಮಾಡಿದ್ದೇನೆ” ಎಂದು ಹುಸೇನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮತ್ತೋರ್ವ ಮುಸ್ಲಿಂ ಯುವಕ ಸದ್ದಾಂ, “ನನಗೆ ಈಜು ಗೊತ್ತಿಲ್ಲ, ಆದ್ದರಿಂದ ನಾನು ಯಾರನ್ನೂ ಮುಳುಗದಂತೆ ರಕ್ಷಿಸಲಿಲ್ಲ, ಆದರೆ ನಾನು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಇತರರಿಗೆ ಸಹಾಯ ಮಾಡಿದೆ” ಎಂದು ಹೇಳಿದ್ದಾರೆ.
ನಾವು 15 ಮೀನುಗಾರರ ಪರಿಣಿತ ತಂಡವನ್ನು ಹೊಂದಿದ್ದೇವೆ. ಎಲ್ಲಾ ಉತ್ತಮ ಈಜುಗಾರರಾಗಿದ್ದಾರೆ. ಮೋರ್ಬಿಯಲ್ಲಿರುವ ಮಿಯಾನಾ ಸಮುದಾಯದವರು ನಾವು. ಅಂತಹ ಯಾವುದೇ ದುರಂತ ಸಂಭವಿಸಿದಾಗ ನಾವು ಜೀವಗಳನ್ನು ಉಳಿಸಲು ಧಾವಿಸುತ್ತೇವೆ. ಸೇತುವೆ ಕುಸಿದ ನಂತರ ನಮ್ಮ ಸಮುದಾಯವು, ಮಚ್ಚು ನದಿಯಲ್ಲಿ ಮುಳುಗುತ್ತಿದ್ದ ಸುಮಾರು 80 ಜನರನ್ನು ರಕ್ಷಿಸಿದೆ” ಎಂದು ಸಮುದಾಯದ ವಯಸ್ಸಾದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ತನ್ನ ಸ್ನೇಹಿತರ ಜೊತೆ ಸೇರಿ ಹಲವಾರು ಜೀವಗಳನ್ನು ಉಳಿಸಿದ ನಯೀಮ್ ಶೇಖ್, “ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುವ ಪ್ರಯತ್ನದಲ್ಲಿ ನನ್ನ ಸ್ನೇಹಿತರೊಬ್ಬರು ಸಾವನ್ನಪ್ಪಿದ್ದಾರೆ” ಎಂದಿದ್ದಾರೆ. ನಾನು ಮತ್ತು ನನ್ನ ಸ್ನೇಹಿತರು ಸೇರಿ 50 ರಿಂದ 60 ಜನರನ್ನು ಉಳಿಸಿದ್ದೇವೆ ಎಂದು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಅಪಘಾತದ ವೇಳೆ ಸೇತುವೆ ಮೇಲೆ 400-500 ಮಂದಿ ಇದ್ದರು. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗೆ ಸಿಲುಕಿದ್ದರು. ಆದರೆ ಈ ಸಂತ್ರಸ್ತರಲ್ಲಿ ಹಲವಾರು ಜನರ ಪ್ರಾಣ ಉಳಿಸಿದ ಕೆಲವರು ಇದ್ದಾರೆ. ಅವರಲ್ಲಿ ಒಬ್ಬರು ನಯೀಮ್ ಶೇಖ್. ಇತರರ ಜೀವಗಳನ್ನು ಉಳಿಸಲು ತನ್ನ ಪ್ರಾಣವನ್ನೂ ಅಪಾಯಕ್ಕೆ ತಳ್ಳಿದ್ದರು.
ಮುಸ್ಲಿಂ ಯುವಕರ ಸಾಹಸಗಾಥೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. “ಇದು ದ್ವೇಷದ ವ್ಯಾಪಾರಿಗಳಿಗೆ ಸೂಕ್ತವಾದ ಪ್ರತ್ಯುತ್ತರ! ಮಾನವೀಯತೆಯು ಎಲ್ಲಾ ಧರ್ಮಗಳನ್ನು ಮೀರಿದೆ” ಎಂದು ಟ್ವಿಟರ್ ಬಳಕೆದಾರರು ಹೇಳಿದ್ದಾರೆ.
ಕೃಪೆ :ನಾನು ಗೌರಿ