

ಲಕ್ನೋ: ಕೋವಿಡ್ ಸಮಯದಲ್ಲಿ 400 ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿದ ಆರೋಪದಲ್ಲಿ ಉತ್ತರಪ್ರದೇಶದ ಮೀರತ್ ನಲ್ಲಿ ಒಂಬತ್ತು ಜನರ ಮೇಲೆ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.
ತಮ್ಮನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆಮಿಷ ಒಡ್ಡಲಾಗಿದೆ ಎಂದು ಸಂತ್ರಸ್ಥರು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಟಿಯಾಗಿ ದೂರು ನೀಡಿದ್ದಾರೆ. ಈ ಘಟನೆ ಮೀರತ್ ನ ಮಂಗಟ್ ಪುರಂನ ಮಲಿನ್ ಗ್ರಾಮದಲ್ಲಿ ನಡೆದಿದೆ.
ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಹಿಂದೂ ದೇವರು, ದೇವತೆಗಳ ಫೋಟೋಗಳನ್ನು ತೆಗೆದು ಹಾಕುವಂತೆ ನಮಗೆ ಒತ್ತಾಯ ಮಾಡಲಾಗಿತ್ತು. ಕೋವಿಡ್ ಸಮಯದಲ್ಲಿ ನಮ್ಮನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ತಿಳಿಸಲಾಗಿದೆ.
ಮತಾಂತರಕ್ಕೊಳಗಾದ ವ್ಯಕ್ತಿಗಳು ಬಿಜೆಪಿ ನಾಯಕನ ಜೊತೆ ಬ್ರಹ್ಮಪುತ್ರಿ ಪೊಲೀಸ್ ಠಾಣೆಗೆ ಆಗಮಿಸಿ, ನಮಗೆ ಹಣ ಮತ್ತು ಆಹಾರದ ಆಮಿಷವೊಡ್ಡಿ ಮತಾಂತರಗೊಳಿಸಿರುವುದಾಗಿ ಆರೋಪಿಸಿದ್ದಾರೆ.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ಮತ್ತೆ ಯಾವಾಗ ಹಿಂದೂ ಧರ್ಮಕ್ಕೆ ಪರಿವರ್ತನೆಗೊಂಡಿದ್ದೀರಿ, ಯಾಕಾಗಿ ಹಿಂದೂ ಹಬ್ಬವನ್ನು ಆಚರಿಸುತ್ತಿದ್ದೀರಿ ಎಂದು ಪ್ರಶ್ನಿಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಎಫ್ ಐಆರ್ ನಲ್ಲಿ ಆರೋಪಿಗಳಾದ ಛಾಬ್ಲಿ ಅಲಿಯಾಸ್ ಶಿವ, ಬಿನ್ವಾ, ಅನಿಲ್, ಸರ್ದಾರ್, ನಿಕ್ಕೂ, ಬಸಂತ್, ಪ್ರೇಮ್, ಟಿಟ್ಲಿ ಮತ್ತು ರಾಣಿ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ವರದಿ ತಿಳಿಸಿದೆ.