
ಮಂಗಳೂರು: ಮಂಗಳೂರಿನ ಕಾಟಿಪಳ್ಳದಲ್ಲಿ ಅಕ್ರಮ ಜಾನುವಾರು ಮಾಂಸಕ್ಕಾಗಿ ವಧೆ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಮೂವರು ವ್ಯಾಪಾರಿಗಳ ಮನೆ ಮತ್ತು ಅಂಗಡಿಯನ್ನು ಶಾಸಕ ಭರತ್ ಶೆಟ್ಟಿ ಒತ್ತಡದ ಮೇರೆಗೆ ದ.ಕ ಜಿಲ್ಲಾಡಳಿತ ಮುಟ್ಟುಗೋಲು ಹಾಕಿದ ನಡೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತಿದೆ.
ಶಾಸಕ ಭರತ್ ಶೆಟ್ಟಿ ಕ್ಷೇತ್ರವೂ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಹಾಗೂ ಕೊರೋನಾ ಸಂದರ್ಭದಲ್ಲಿ ಮೃತಪಟ್ಟ ಹಿಂದು ಮಹಿಳೆಯೊಬ್ಬಳ ಮೃತ ಶರೀರವನ್ನು ದಫನ ಮಾಡಲು ರುದ್ರಭೂಮಿಯಲ್ಲಿ ಅವಕಾಶ ನೀಡದೆ ರಾತ್ರಿ ಇಡೀ ಶವವನ್ನು ಮಂಗಳೂರಿಡೀ ಸುತ್ತಾಡುವಂತೆ ಮಾಡಿದ್ದರಿಂದ ಭರತ್ ಶೆಟ್ಟಿಯ ವಿರುದ್ಧ ಅಸಮಾಧಾನದ ಹೊಗೆ ಇರುವುದರಿಂದ ಈ ಬಾರಿ ಟಿಕೆಟ್ ಸಿಗುವುದು ಸಂಶಯ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಾ ಇರುವುದರಿಂದ ಇವರು ತಮ್ಮ ಶಾಸಕ ಸ್ಥಾನದ ಅಧಿಕಾರವನ್ನು ದುರುಪಯೋಗ ಪಡಿಸಿ ಗೋ ವ್ಯಾಪಾರಿಗಳ ಮನೆಯನ್ನು ಮತ್ತು ಅಂಗಡಿಯನ್ನು ಗೂಂಡಾ ರಾಜ್ಯ ಎಂಬ ಕುಖ್ಯಾತಿ ಹೊಂದಿರುವ ಯೋಗಿಯ ಯುಪಿ ಮಾದರಿಯಂತೆ ಮುಟ್ಟುಗೋಲು ಹಾಕುವಂತೆ ಮಾಡಿ ಸಂಘಪರಿವಾರ ನಾಯಕರ ಮೆಚ್ಚುಗೆ ಗಳಿಸಿ ಪುನಃ ಟಿಕೆಟ್ ಪಡೆಯುವ ಹುನ್ನಾರವಾಗಿದೆ.

ಈ ಘಟನೆಯಲ್ಲಿ ಕಾನೂನಿನ ಸ್ಪಷ್ಟ ಉಲ್ಲಂಘನೆ ಯಾಗಿದೆ,ಮನೆ ಮುಟ್ಟುಗೋಲು ಹಾಕಬೇಕೆಂಬ ಮನವಿಯಲ್ಲಿ ಅಕ್ರಮವಾಗಿ ದನವನ್ನು ಹತ್ಯೆ ಮಾಡುವುದರಿಂದ ಕೋಮು ಗಲಭೆಯ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಕೋಮು ಗಲಭೆಯ ತಡೆಗಾಗಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ ಯನ್ನು ತಂದಿರುವುದಲ್ಲ “ಕೃಷಿ ಮತ್ತು ಪಶು ಸಂಗೋಪನೆಯ ಅಭಿವೃದ್ಧಿಯ ಉದ್ದೇಶಕ್ಕಾಗಿ ಈ ಕಾಯಿದೆಯನ್ನು ಜಾರಿಗೆ ತರಲಾಗಿದೆ ಎಂದು ಕಾಯಿದೆಯಲ್ಲಿ ಉಲ್ಲೇಖಿಸಿದ್ದನ್ನು ಜಿಲ್ಲಾಡಳಿತ ಗಮನಿಸಬೇಕು. ಇಲ್ಲಿ ಮನೆ ಮುಟ್ಟುಗೋಲು ಹಾಕಿದ್ದು ಅಲ್ಲದೇ ಅದರ ಆರ್ ಟಿ ಸಿ ಯನ್ನು ಸರಕಾರದ ಹೆಸರಿನಲ್ಲಿ ಬದಲಾವಣೆ ಮಾಡಿ ಜಿಲ್ಲಾಡಳಿತ ಸರ್ವಾಧಿಕಾರಿ, ದಬ್ಬಾಳಿಕೆಯ ನೀತಿಯನ್ನು ಅನುಸರಿಸುತ್ತಿರುವುದು ಅಕ್ಷಮ್ಯ ವಾಗಿದೆ.
ಹಾಗಾಗಿ ದ.ಕ ಜಿಲ್ಲಾಡಳಿತ ಶಾಸಕರ ಇಂತಹ ಕಾನೂನು ವಿರೋಧಿ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ವಾಗಿ ವರ್ತಿಸಬೇಕೆಂದು ಎಸ್ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.