

ಯುಕೆಯ ನೂತನ ಪ್ರಧಾನಿಯಾಗಿ ಭಾರತ ಮೂಲದ ರಿಷಿ ಸುನಕ್ (Rishi Sunak) ಆಯ್ಕೆಯಾಗಿದ್ದಾರೆ. ಕೊನೆ ಗಳಿಗೆಯಲ್ಲಿ ಪೆನ್ನಿ ಮೊರ್ಡಾಂಟ್ ರೇಸ್ನಿಂದ ಹಿಂದೆ ಸರಿದಿದ್ದು, ಯಾವುದೇ ಪ್ರತಿಸ್ಪರ್ಧಿಗಳಿಲ್ಲದೆ ರಿಷಿ ಆಯ್ಕೆ ಆಗಿದ್ದಾರೆ. ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಿಂದೆ ಸರಿದಾಗಲೇ ರಿಷಿ ಪ್ರಧಾನಿ ಪಟ್ಟಕ್ಕೇರುವುದು ಬಹುತೇಕ ಖಚಿತವಾಗಿತ್ತು. ತಿಂಗಳುಗಳ ಹಿಂದೆಯಷ್ಟೇ ನಡೆದ ಬ್ರಿಟನ್ ಪ್ರಧಾನಿ ಚುನಾವಣೆಯಲ್ಲಿ ರಿಷಿ ಸುನಕ್, ಲಿಜ್ ಟ್ರಸ್ (Liz Truss) ವಿರುದ್ಧ ಪರಾಭವಗೊಂಡಿದ್ದರು. ಲಿಜ್ ಟ್ರಸ್ ಪ್ರಧಾನಿ ಹುದ್ದೆಗೇರಿದರೂ ಆರ್ಥಿಕ ಬಿಕ್ಕಟ್ಟು ಮತ್ತು ಸರ್ಕಾರದ ನೀತಿಯಿಂದಾಗಿ ಹಿನ್ನಡೆ ಅನುಭವಿಸಿ ಅಧಿಕಾರಕ್ಕೇರಿದ 45ದಿನಗಳಲ್ಲಿ ರಾಜೀನಾಮೆ ಕೊಟ್ಟು ಹೊರನಡೆದಿದ್ದರು .ಲಿಜ್ ಟ್ರಸ್ ಹೊರ ನಡೆದ ನಂತರ ನೂತನ ಪ್ರಧಾನಿ ಆಯ್ಕೆಗೆ ಸಿದ್ಧತೆ ನಡೆದಿದ್ದು, ರಿಷಿ ಮತ್ತೊಮ್ಮೆ ಚುನಾವಣಾ ಕಣಕ್ಕಿಳಿಯುವುಗಾಗಿ ಘೋಷಿಸಿದ್ದರು. ಇತ್ತ ಪೆನ್ನಿ ಮೊರ್ಡಾಂಟ್ ಒಬ್ಬರೇ ಸುನಕ್ ಅವರ ಪ್ರತಿಸ್ಪರ್ಧಿಯಾಗಿದ್ದರು.
178 ಟೋರಿ ಸಂಸದರು ಸಾರ್ವಜನಿಕ ಬೆಂಬಲ ವ್ಯಕ್ತಪಡಿಸಿದ್ದರಿಂದ ಕನ್ಸರ್ವೇಟಿವ್ ಸಂಸದರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ರಿಷಿ ಸುನಕ್ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ. ಹಲವಾರು ಪ್ರಮುಖ ಕನ್ಸರ್ವೇಟಿವ್ ಸಂಸದರು ರಿಷಿ ಸುನಕ್ ಅವರ ಪ್ರಚಾರ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾರೆ. ಇಂಟರ್ನ್ಯಾಷನಲ್ ಟ್ರೇಡ್ ಸೆಕ್ರೆಟರಿ ಕೆಮಿ ಬಡೆನೋಚ್ ಮತ್ತು ಮಾಜಿ ಶಿಕ್ಷಣ ಕಾರ್ಯದರ್ಶಿ ಗೇವಿನ್ ವಿಲಿಯಮ್ಸನ್ ಇಬ್ಬರೂ ರಿಷಿ ಸುನಕ್ ಅವರ ಕಚೇರಿಗೆ ಭೇಟಿ ನೀಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.