

ರಾಮನಗರ: ಮಾರ್ಯದೆಗೆ ಅಂಜಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ(45) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಮಠದ ತಮ್ಮ ಕೊಠಡಿಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ನಲ್ಲಿ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಯಾರ ಸಹಾಯವೂ ಇರಲಿಲ್ಲ. ಕೆಲವರಿಂದ ಬೆದರಿಕೆ ಕರೆಗಳು ಸಹ ಬಂದಿವೆ ಎಂದು ಉಲ್ಲೇಖಿಸಿದ್ದಾರೆ.
ಮಾಗಡಿ ತಾಲೂಕಿನಲ್ಲೇ ದೊಡ್ಡ ಮಠ ಎಂಬ ಪ್ರಖ್ಯಾತಿ ಪಡೆದಿರುವ ಕಂಚುಗಲ್ ಬಂಡೆಮಠದ ಆವರಣದಲ್ಲಿ ಶಾಲಾ ಕಾಲೇಜುಗಳಿವೆ. 50ಕೋಟಿಗೂ ಹೆಚ್ಚು ಮೌಲ್ಯ ಹೊಂದಿರುವ ಈ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಠ ತಾಜ್ಯ ವಸ್ತು ವಿಲೇವಾರಿ ಘಟಕಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಅನೇಕ ಉತ್ತಮ ಕಾರ್ಯಕ್ರಮಗಳನ್ನು ಮಾಡಿ ಸಮಾಜಕ್ಕೆ ಮಾದರಿ ಮಠವಾಗಿಯೂ ಇದು ಬೆಳೆದಿದೆ. ಆದ್ರೆ ಕೆಲ ದಿನಗಳಿಂದ ಸ್ವಾಮೀಜಿಗಳ ವಿರುದ್ಧ ಕೇಳಿ ಬಂದ ಆರೋಪಕ್ಕೆ ಅಂಜಿ ಸ್ವಾಮೀಜಿ ಪ್ರಾಣ ತ್ಯಾಗ ಮಾಡಿದ್ದಾರೆ.
ಸ್ವಾಮೀಜಿ ನಿಧನ ಹಿನ್ನೆಲೆ ಹಲವು ಮಠಾಧೀಶರು ಮಠಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇನ್ನು ಡೆತ್ ನೋಟ್ನಲ್ಲಿರುವ ಕೆಲವು ಮಾಹಿತಿಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಕೆಲ ವೈಯಕ್ತಿಕ ಕಾರಣಗಳಿಂದ ಬೇಸತ್ತು ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಪೋಲಿಸರ ತನಿಖೆ ನಂತರ ಸತ್ಯ ಬಯಲಾಗಲಿದೆ.
ಬಸವಲಿಂಗ ಸ್ವಾಮೀಜಿಯವರು ಚನ್ನಮಲ್ಲಯ್ಯ, ಪುಟ್ಟಗೌರಮ್ಮರ ಎಂಟನೇ ಪುತ್ರರಾಗಿದ್ದಾರು. ಶ್ರೀಗಳು ಸೇರಿದಂತೆ 5 ಮಂದಿ ಗಂಡು, 3 ಮಂದಿ ಹೆಣ್ಣು ಮಕ್ಕಳಿದ್ದಾರೆ. 1 ರಿಂದ 8 ನೇ ತರಗತಿಯವರೆಗೂ ಬಂಡೇಮಠದಲ್ಲೆ ವಿದ್ಯಾಭ್ಯಾಸ ಮಾಡಿದ ನಂತರ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ, ಸ್ವಾಮೀಜಿಗಳ ಹೆಸರಲ್ಲಿ 80 ಎಕರೆ ಜಮೀನು ಇದೆ.
ಶ್ರೀಗಳು ಬಂಡೇಮಠದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರು. ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿ ಯವರು ಇದೇ ರೀತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ಒಂದು ವರ್ಷವೂ ಆಗಿಲ್ಲ. ಆಗ ಇದೇ ರೀತಿ ಮತ್ತೊಂದು ಘಟನೆ ನಡೆದಿದೆ. ಕುದೂರು ಪೊಲೀಸ್ ಇನ್ಸ್ ಪೆಕ್ಟರ್ ಎಪಿ.ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾವಿರಾರು ಮಂದಿ ಭಕ್ತರು ಮಠದ ಬಳಿ ಜಮಾಯಿಸಿದ್ದಾರೆ.