

ಉಡುಪಿ: ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಎಲ್ಲ ರಾಜಕೀಯ ಜಾಥಗಳ, ಜಾತ್ರೆಗಳ ಸೀಝನ್ ನಡೆಯುತ್ತಿದೆ. ತಮ್ಮ ತಮ್ಮ ಪಕ್ಷ ಗಟ್ಟಿ ಪಡಿಸಲು ನಡೆಯುತ್ತಿರುವ ಕಸರತ್ತಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರಾದ ಎಡ್ವಕೇಟ್ ತಾಹೀರ್ ಹುಸೇನ್ ಹೇಳಿದರು.
ನಿರುದ್ಯೋಗದ ಕುರಿತು, ಬೆಲೆ ಏರಿಕೆಯ ಕುರಿತು ಯಾರು ಕೂಡ ಮಾತನಾಡುತ್ತಿಲ್ಲ. ವೆಲ್ಫೇರ್ ಪಾರ್ಟಿ ಜನಪರವಾಗಿ ಕೆಲಸ ಮಾಡುತ್ತಿದ್ದು ಜನರಿಗೆ ಈ ಕುರಿತು ಜಾಗೃತಗೊಳಿಸುತ್ತ, ಸರಕಾರ ಎದ್ದೇಳಿಸುವ ನಿಟ್ಟಿನಲ್ಲಿ ಜಾಥ ಆಯೋಜಿಸಲಾಗಿದೆ.
ಸರಕಾರಗಳು ಹಕ್ಕಿಗಾಗಿ ಮಾತನಾಡಿದಾಗ ಬೆದರಿಸುವ, ಹೆದರಿಸುವ ಕೆಲಸ ಮಾಡುತ್ತದೆ. ಹೋರಾಟ ಮಾಡಿದರೆ ಖಲಿಸ್ತಾನಿ, ನಕ್ಸಲರೆಂದು ಪಟ್ಟ ಕಟ್ಟುತ್ತಾರೆ. ಈ ದೇಶದ ಅಲ್ಪಸಂಖ್ಯಾತರು ಹಕ್ಕಿಗಾಗಿ ಮಾತನಾಡಿದಾಗ ಉಗ್ರರು ಎಂದು ಪಟ್ಟ ಕಟ್ಟುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಹಕ್ಕಿಗಾಗಿ ಮಾತನಾಡುವವರ ಧಮನಿಸುವ ಕೆಲಸ ಸರಕಾರ ಪ್ರಾಯೋಜಿತವಾಗಿ ನಡೆಯುತ್ತಿದೆ ಎಂದರು.

ಪೆಟ್ರೋಲ್ ಡಿಸೇಲ್ ಬೆಲೆ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿದೆ. ಇಷ್ಟೆಲ್ಲ ಬೆಲೆ ಏರಿಕೆಯಾಗುತ್ತಿದ್ದರೆ ಸರಕಾರ ಬೆಲೆ ನಿಯಂತ್ರಿಸಬೇಕಿತ್ತು. ಆದರೆ ಸರಕಾರ ಅಗತ್ಯ ವಸ್ತುಗಳ ಮೇಲೆ ಇನ್ನಷ್ಟು ಜಿ.ಎಸ್.ಟಿ ಹೇರುವ ಪ್ರಯತ್ನ ಮಾಡುತ್ತಿದೆ ಎಂದರು.
ಸರಕಾರ ಜನಪರ ಕೆಲಸ ಮಾಡುವ ಬದಲು ಜನ ಸಾಮಾನ್ಯರನ್ನು ತುಳಿಯುವ ಕೆಲಸ ಮಾಡುತ್ತಿದೆ. ದೇಶದಲ್ಲಿ 35 ಕೋಟಿ ಮಂದಿ ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಎಲ್ಲವೂ ಕಮಿಷನ್ ಆಧಾರದಲ್ಲಿ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದರು. ಜಾಥದ ಮೂಲಕ ಜನಜಾಗೃತಿ ಮೂಡಿಸುವ ಉದ್ದೇಶ ನಮ್ಮ ಪಕ್ಷದಾಗಿದೆ. ಮತದಾನದ ಹಕ್ಕು ಸರಿಯಾಗಿ ಚಲಾಯಿಸಬೇಕಾಗಿದೆ. ಮತ ಮಾರಾಟಕ್ಕೀಡಬಾರದು. ನಾವು ಮೌಲ್ಯಧಾರಿತ ರಾಜಕೀಯ ಮಾಡಬೇಕು ಎಂದು ಕರೆ ನೀಡಿದರು.

ವೆಲ್ಫೇರ್ ಪಾರ್ಟಿ ರಾಜ್ಯ ಉಪಾಧ್ಯಕ್ಷರಾದ ಶ್ರೀಕಾಂತ್ ಸಾಲಿಯಾನ್,FITU ರಾಜ್ಯಾಧ್ಯಕ್ಷರಾದ ಸುಲೈಮಾನ್ ಕಲ್ಲರ್ಪೆ, ರಾಜ್ಯ ಕಾರ್ಯದರ್ಶಿ ಹಬಿಬುಲ್ಲಾ, ದಿನಕರ ಅವರು ಈ ಸಂದರ್ಭದಲ್ಲಿ ಮಾತನಾಡಿದರು.
ಇದ್ರಿಸ್ ಹೂಡೆ ಪ್ರಸ್ತಾವಿಕಾಗಿ ಮಾತನಾಡಿ ಸ್ವಾಗತಿಸಿದರು. ಅನ್ವರ್ ಅಲಿ ಕಾಪು ನಿರೂಪಿಸಿದರು. ಅಬ್ದುಲ್ ರಝಾಕ್ ಕೋಡಿಬೆಂಗ್ರೆ ಧನ್ಯವಾದವಿತ್ತರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮುಜಾಹಿದ್ ಪಾಷ, ಸುಲೇಮಾನ್ ಕಲ್ಲರ್ಪೆ, ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್, ಜಿಲ್ಲಾ ಉಪಾಧ್ಯಕ್ಷರಾದ ಡಾ.ಶಾಹಜಾನ್, ವಿಜಯ ಪಡುಕುದ್ರು,ಜಿಲ್ಲಾ ಮಹಿಳಾ ಸಂಚಾಲಕಿ ಜಮಿಲಾ ಸದಿದಾ, ಗ್ರಾ.ಪಂ ಸದಸ್ಯೆ ಮಮ್ತಾಝ್ ಅವರು ಉಪಸ್ಥಿತರಿದ್ದರು.