

ಹೊಸದಿಲ್ಲಿ: ಏಕರೂಪ ನಾಗರಿಕ ಸಂಹಿತೆ(ಯುಸಿಸಿ)ಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಮೊದಲ ಬಾರಿಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ದೇಶದಲ್ಲಿ ಎಲ್ಲ ಧರ್ಮಗಳಿಗೂ ಸಮಾನ ಕಾನೂನು ಅನ್ವಯವಾಗಿಸುವ ಸಂಹಿತೆ ಅನುಷ್ಠಾನದ ಪರ ಒಲವು ವ್ಯಕ್ತಪಡಿಸಿದೆ
ವಿವಾದಾತ್ಮಕ ಹಾಗೂ ಬಹಳ ಸೂಕ್ಷ್ಮ ವಿಚಾರ ವಾಗಿರುವ ಯುಸಿಸಿ ಕುರಿತು ಮಂಗಳವಾರ ಪ್ರಥಮ ಬಾರಿಗೆ ಸುಪ್ರೀಂ ಕೋರ್ಟ್ಗೆ ಅಫಿದವಿತ್ ಸಲ್ಲಿಸಿರುವ ಕೇಂದ್ರ ಸರಕಾರ, ಸಮಾನ ನಾಗರಿಕ ಸಂಹಿತೆಯನ್ನು ಬೆಂಬಲಿಸಿ ಹಲವು ವಾದಗಳನ್ನು ಮಂಡಿಸಿದೆ.
ವಿಚ್ಛೇದನ, ದತ್ತು ಸ್ವೀಕಾರ, ಪೋಷಕತ್ವ, ಉತ್ತ ರಾಧಿಕಾರ, ಮದುವೆ ವಯಸ್ಸು ಹಾಗೂ ಜೀವನಾಂಶದ ವಿಚಾರ ಬಂದಾಗ, ಧರ್ಮ ಮತ್ತು ಲಿಂಗ ತಟಸ್ಥವಾದ ಏಕರೂಪ ಕಾನೂನು ಗಳನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ನ್ಯಾಯ ವಾದಿ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಸರಕಾರ ಈ ಅಫಿದವಿತ್ ಸಲ್ಲಿಸಿದೆ.
ಈ ಹಿಂದೆ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಅರ್ಜಿಗಳ ಕುರಿತು ಕೇಂದ್ರದಿಂದ ಸಮಗ್ರ ಪ್ರತಿಕ್ರಿಯೆಯನ್ನು ಕೇಳಲಾಗಿತ್ತು.
ಮಂಗಳವಾರ ಅಫಿದವಿತ್ ರೂಪದಲ್ಲಿ ತನ್ನ ನಿಲುವನ್ನು ಸರ್ವೋಚ್ಚ ನ್ಯಾಯಾಲಯದ ಮುಂದಿಟ್ಟಿರುವ ಕೇಂದ್ರ ಸರಕಾರ, “ಪ್ರಸ್ತುತ ಬೇರೆ ಬೇರೆ ಧರ್ಮಗಳು ಮತ್ತು ಪಂಗಡ ಗಳಿಗೆ ಸೇರಿರುವ ನಾಗರಿಕರು ತಮ್ಮ ಆಸ್ತಿಪಾಸ್ತಿ ಮತ್ತು ವೈವಾಹಿಕ ನೀತಿನಿಯಮಗಳ ವಿಷಯ ದಲ್ಲಿ ಭಿನ್ನವಾದ ಹಾಗೂ ಪ್ರತ್ಯೇಕವಾದ ಕಾನೂನು ಗಳನ್ನು ಅನುಸರಿಸುತ್ತಿದ್ದಾರೆ. ಆದರೆ ಈ ಕ್ರಮ ದೇಶದ ಏಕತೆಗೆ ಅಡ್ಡಿ ಉಂಟು ಮಾಡುತ್ತವೆ. ಏಕರೂಪ ನಾಗರಿಕ ಸಂಹಿತೆ ಜಾರಿ ಯಾದರೆ ಅದು ವೈಯಕ್ತಿಕ ಕಾನೂನು ಗಳನ್ನು ತೆರವುಗೊಳಿಸುತ್ತದೆ’ ಎಂದು ಹೇಳಿದೆ
ಈಗಾಗಲೇ 21ನೇ ಕಾನೂನು ಆಯೋಗವು ಈ ಬಗ್ಗೆ ವಿಸ್ತೃತವಾಗಿ ಪರಿಶೀಲಿಸಿದೆ. ಆದರೆ, 2018ರಲ್ಲೇ ಆಯೋಗದ ಅವಧಿ ಕೊನೆಗೊಂಡಿರುವ ಕಾರಣ, 22ನೇ ಕಾನೂನು ಆಯೋಗದ ಮುಂದೆ ಈ ವಿಷಯವನ್ನು ಮಂಡಿಸುವುದಾಗಿ ಸರಕಾರ ತಿಳಿಸಿದೆ.
ಇದೇ ವೇಳೆ, ಯುಸಿಸಿ ಎನ್ನುವುದು ಚುನಾಯಿತ ಜನಪ್ರತಿನಿಧಿಗಳು ನಿರ್ಧರಿಸ ಬೇಕಾದಂಥ ವಿಚಾರ. ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿ ಶಾಸನ ರೂಪಿಸಬೇಕೇ, ಬೇಡವೇ ಎಂಬ ಬಗ್ಗೆ ಶಾಸಕಾಂಗ ನಿರ್ಧರಿಸುತ್ತದೆ. ಈ ಬಗ್ಗೆ ನ್ಯಾಯಾಲಯವು ನಿರ್ದೇಶನ ನೀಡುವಂತಿಲ್ಲ ಎಂದೂ ಅಫಿಡವಿಟ್ನಲ್ಲಿ ಸರಕಾರ ಉಲ್ಲೇಖಿಸಿದೆ.
ಎಷ್ಟು ಅರ್ಜಿಗಳು?
ಏಕರೂಪ ನಾಗರಿಕ ಸಂಹಿತೆ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ಗೆ ಒಟ್ಟು 6 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ನಾಲ್ಕು ಅರ್ಜಿಗಳನ್ನು ಬಿಜೆಪಿ ನಾಯಕ, ವಕೀಲ ಅಶ್ವಿನಿ ಉಪಾಧ್ಯಾಯ ಅವರೇ ಸಲ್ಲಿಸಿದ್ದರೆ, ಒಂದು ಅರ್ಜಿಯನ್ನು ಲುಬಾ° ಖುರೇಶಿ ಎಂಬವರು, ಮತ್ತೊಂದು ಅರ್ಜಿಯನ್ನು ಡೋರಿಸ್ ಮಾರ್ಟಿನ್ ಎಂಬವರು ಸಲ್ಲಿಸಿದ್ದರು. ಸಂವಿಧಾನದ 44ನೇ ವಿಧಿಯನ್ನು ಜಾರಿ ಮಾಡುವಂತೆ ಸರಕಾರಕ್ಕೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಿರ್ದೇಶಿಸಲು ಸಾಧ್ಯವಾಗುವುದಿಲ್ಲವಾದರೂ, ಯುಸಿಸಿ(ಏಕರೂಪ ನಾಗರಿಕ ಸಂಹಿತೆ) ಕರಡು ಸಿದ್ಧಪಡಿಸಲು ಸಮಿತಿಯನ್ನು ರಚಿಸುವಂತೆ ಕೇಂದ್ರ ಸರಕಾರಕ್ಕೆ ನ್ಯಾಯಾಲಯ ಸೂಚಿಸಬಹುದು ಎಂದೂ ಕೆಲವು ಅರ್ಜಿದಾರರು ವಾದಿಸಿದ್ದಾರೆ.