

ನವದೆಹಲಿ: ಅಮೆರಿಕದ (United States) ವಾಲ್ಸ್ಟ್ರೀಟ್ ಜರ್ನಲ್ ಪತ್ರಿಕೆಯ (Wall Street Journal News Paper) ಮುಖಪುಟದಲ್ಲಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸುಪ್ರೀಂಕೋರ್ಟ್ನ ಇಬ್ಬರು ನ್ಯಾಯಾಧೀಶರು ಮತ್ತು ಇತರೆ ಹಲವು ಹಿರಿಯ ಅಧಿಕಾರಿಗಳನ್ನು ಟೀಕಿಸುವ ಮತ್ತು ಅವರ ವಿರುದ್ಧ ನಿರ್ಬಂಧ ಹೇರುವಂತೆ ಕೋರುವ ಜಾಹೀರಾತೊಂದು (Advertisement) ಅಕ್ಟೋಬರ್ 13ರಂದು ಪ್ರಕಟವಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅಮೆರಿಕ ಭೇಟಿಯ ವೇಳೆಯೇ, ಭಾರತದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಮಸಿ ಬಳಿಯುವ ಯತ್ನವನ್ನು ಅಮೆರಿಕ ಮೂಲದ ‘ಫ್ರಂಟಿಯರ್ಸ್ ಆಫ್ ಫ್ರೀಡಂ’ (Frontiers of Freedom) ಎಂಬ ಸಂಸ್ಥೆ ಜಾಹೀರಾತಿನ ಮೂಲಕ ನಡೆಸಿದೆ. ಈ ಸಂಸ್ಥೆಯ ಹಿಂದೆ ಬೆಂಗಳೂರು ಮೂಲದ ದೇವಾಸ್ (Devas) ಸಂಸ್ಥೆಯ ಮಾಜಿ ಸಿಇಒ, ದೇಶಭ್ರಷ್ಟ ಉದ್ಯಮಿ ರಾಮಚಂದ್ರ ವಿಶ್ವನಾಥನ್ ಎಂಬಾತನ ಕೈವಾಡವಿದೆ ಎಂದು ಶಂಕಿಸಲಾಗಿದೆ.
ಜಾಹೀರಾತಲ್ಲಿ ಏನಿದೆ?:‘ಮೋದಿ ಸರ್ಕಾರದ ಈ ಅಧಿಕಾರಿಗಳು ತಮ್ಮ ರಾಜಕೀಯ ಹಿತಾಸಕ್ತಿ ಮತ್ತು ವೈರಿ ಉದ್ಯಮಿಗಳನ್ನು ಮಟ್ಟಹಾಕಲು ನೆಲದ ಕಾನೂನನ್ನು ಅಸ್ತ್ರಗಳಾಗಿ ಬಳಸಿಕೊಂಡಿದ್ದಾರೆ. ಈ ಮೂಲಕ ಭಾರತವನ್ನು ಹೂಡಿಕೆದಾರರಿಗೆ ಅಸುರಕ್ಷಿತ ಮಾಡಿದ್ದಾರೆ. ಹೀಗಾಗಿ ಇವರೆಲ್ಲರ ವಿರುದ್ಧ ನಿರ್ಬಂಧ ಹೇರಬೇಕು. ಇವರಿಗೆ ವೀಸಾ ನೀಡಿದ್ದರೆ ರದ್ದು ಮಾಡಬೇಕು. ಅಮೆರಿಕದಲ್ಲಿನ ಅವರ ಆಸ್ತಿ ಜಪ್ತಿ ಮಾಡಬೇಕು. ಇದಕ್ಕಾಗಿ ಅಧ್ಯಕ್ಷ ಜೋ ಬೈಡೆನ್ ಅವರು ಮ್ಯಾಗ್ನಿಟ್ಸ್ಕೈ ಕಾಯ್ದೆ ಬಳಸಬೇಕು (Magnitsky Human Rights Accountability Act)’ ಎಂದು ಹೇಳಲಾಗಿದೆ.
ಯಾರ ಹೆಸರು?:ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇಸ್ರೋದ ಅಂಗಸಂಸ್ಥೆ ಆ್ಯಂಟ್ರಿಕ್ಸ್ನ ರಾಕೇಶ್ ಶಶಿಭೂಷಣ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸುಪ್ರೀಂಕೋರ್ಟ್ನ ಜಡ್ಜ್ಗಳಾದ ನ್ಯಾ.ಹೇಮಂತ್ ಗುಪ್ತಾ, ವಿ.ರಾಮಸುಬ್ರಮಣಿಯನ್, ಸಿಬಿಐ ಡಿಎಸ್ಪಿ ಆಶಿಶ್, ಇಡಿ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಸೇರಿದಂತೆ 12 ಜನರ ಹೆಸರು ಪ್ರಸ್ತಾಪಿಸಲಾಗಿದೆ.
ಯಾರ ಕೈವಾಡ?:ಈ ಜಾಹೀರಾತನ್ನು ‘ಫ್ರಂಟಿಯರ್ಸ್ ಆಫ್ ಫ್ರೀಡಂ’ ಎಂಬ ಸಂಸ್ಥೆ ನೀಡಿದ್ದರೂ ಅದರ ಹಿಂದೆ ಈ ಹಿಂದೆ ಇಸ್ರೋದ ಅಂಗಸಂಸ್ಥೆಯ ಆ್ಯಂಟ್ರಿಕ್ಸ್ಗೆ ವಂಚಿಸಿದ ಪ್ರಕರಣದ ಆರೋಪಿ, ಹಾಲಿ ದೇಶಭ್ರಷ್ಟನಾಗಿರುವ ಬೆಂಗಳೂರು ಮೂಲದ ದೇವಾಸ್ ಕಂಪನಿಯ ಮಾಜಿ ಸಿಇಒ ರಾಮಚಂದ್ರ ವಿಶ್ವನಾಥನ್ ಎಂಬಾತನ ಕೈವಾಡವಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಶಂಕಿಸಿವೆ. ಕಾರಣ, ಈತನ ವಿರುದ್ಧ ತನಿಖೆ ನಡೆಸಿದವರ ಬಹುತೇಕ ಹೆಸರುಗಳೇ ಜಾಹೀರಾತಿನಲ್ಲಿದೆ. ಜೊತೆಗೆ ಈ ಹಿಂದೆ ಈತನ ಈ ಮೇಲ್ಕಂಡವರ ಪೈಕಿ ಹಲವರ ವಿರುದ್ಧ ಇದೇ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಅಮೆರಿಕ ಸರ್ಕಾರವನ್ನು ಒತ್ತಾಯಿಸಿದ್ದ. ರಾಮಚಂದ್ರ ವಿಶ್ವನಾಥನ್ ಹಾಲಿ ಅಮೆರಿಕ ಪ್ರಜೆಯಾಗಿದ್ದಾನೆ.