

ಭಾರತೀಯ ಮಾಧ್ಯಮಗಳಲ್ಲಿ ಸುಮಾರು 90 ಪ್ರತಿಶತದಷ್ಟು ನಾಯಕತ್ವದ ಸ್ಥಾನಗಳನ್ನು ಮೇಲ್ಜಾತಿ ಗುಂಪುಗಳು ಆಕ್ರಮಿಸಿಕೊಂಡಿವೆ. ಒಬ್ಬನೇ ಒಬ್ಬ ದಲಿತ ಅಥವಾ ಆದಿವಾಸಿಯು ಭಾರತೀಯ ಮುಖ್ಯವಾಹಿನಿ ಮಾಧ್ಯಮವನ್ನು ಮುನ್ನಡೆಸುತ್ತಿಲ್ಲ ಎಂದು ಹೊಸ ವರದಿಯೊಂದು ಬಹಿರಂಗಪಡಿಸಿದೆ.
“ನಮ್ಮ ಕಥೆಗಳನ್ನು ಯಾರು ಹೇಳುತ್ತಾರೆ ಎಂಬುದು ಮುಖ್ಯ: ಭಾರತೀಯ ಮಾಧ್ಯಮದಲ್ಲಿ ಅಂಚಿನಲ್ಲಿರುವ ಜಾತಿ ಗುಂಪುಗಳ ಪ್ರಾತಿನಿಧ್ಯ” ಎಂಬ ವಿಷಯದ ಕುರಿತು ಎರಡನೇ ಆವೃತ್ತಿಯ ವರದಿಯನ್ನು ‘ಆಕ್ಸ್‌ಫ್ಯಾಮ್ ಇಂಡಿಯಾ-ನ್ಯೂಸ್‌ಲಾಂಡ್ರಿ’ ಬಿಡುಗಡೆ ಮಾಡಿದ್ದು ಆತಂಕಕಾರಿ ಸಂಗತಿಗಳು ಹೊರಬಿದ್ದಿವೆ.
ವರದಿಯ ಎರಡನೇ ಆವೃತ್ತಿ ಹಲವಾರು ಕಟು ಸತ್ಯಗಳನ್ನು ಹೊರಗೆಳೆದಿದೆ. ಮುಖ್ಯವಾಹಿನಿ ಮುದ್ರಣ, ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಸುಮಾರು 90 ಪ್ರತಿಶತ ನಾಯಕತ್ವ ಸ್ಥಾನಗಳನ್ನು ಪರಿಶಿಷ್ಟ ಜಾತಿಯಿಲ್ಲದ ಸಾಮಾನ್ಯ ಜಾತಿ ಗುಂಪುಗಳು ಆಕ್ರಮಿಸಿಕೊಂಡಿವೆ ಎಂದು ವರದಿಯು ಬಹಿರಂಗಪಡಿಸಿದೆ.
ದಕ್ಷಿಣ ಏಷ್ಯಾದ ಅತಿದೊಡ್ಡ ಸುದ್ದಿ ಮಾಧ್ಯಮ ವೇದಿಕೆಯಾದ ‘ದಿ ಮೀಡಿಯಾ ರಂಬಲ್’ನಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, “ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ 5 ಲೇಖನಗಳಲ್ಲಿ 3 ಲೇಖನಗಳನ್ನು ಸಾಮಾನ್ಯ ಜಾತಿ ಲೇಖಕರು ಬರೆದರೆ, ಕಟ್ಟಕಡೆಯ ಜಾತಿಗಳು (SC, ST ಅಥವಾ OBC) ಕೇವಲ 1 ಲೇಖನವನ್ನಷ್ಟೇ ಬರೆಯುತ್ತಿವೆ.”
ಪತ್ರಿಕೆಗಳು, ಟಿವಿ ಸುದ್ದಿ ವಾಹಿನಿಗಳು, ಸುದ್ದಿ ವೆಬ್‌ಸೈಟ್‌ಗಳು, ನಿಯತಕಾಲಿಕೆಗಳು ಸೇರಿದಂತೆ 121 ಸುದ್ದಿಮನೆಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇವುಗಳ ನಾಯಕತ್ವ ಸ್ಥಾನಗಳಲ್ಲಿ (ಸಂಪಾದಕ-ಮುಖ್ಯ, ವ್ಯವಸ್ಥಾಪಕ ಸಂಪಾದಕ, ಕಾರ್ಯನಿರ್ವಾಹಕ ಸಂಪಾದಕ, ಬ್ಯೂರೋ ಮುಖ್ಯಸ್ಥ, ಇನ್‌ಪುಟ್/ಔಟ್‌ಪುಟ್ ಸಂಪಾದಕ) 106 ಸಂಸ್ಥೆಗಳು ಬಲಾಢ್ಯ ಜಾತಿಗಳಿಂದ ಆಕ್ರಮಿಸಿಕೊಂಡಿವೆ.
ಐದು ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳು, ಆರರಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಇವೆ. ನಾಲ್ಕು ಸಂಸ್ಥೆಗಳ ಸ್ಥಿತಿ ಗುರುತಿಸಲಾಗಿಲ್ಲ. ಡಿಬೇಟ್ ನಡೆಸುವವರ ಪೈಕಿ ಪ್ರತಿ ನಾಲ್ಕು ಆಂಕರ್‌ಗಳಲ್ಲಿ ಮೂವರು ಮೇಲ್ಜಾತಿಯವರು. ಹಿಂದಿ ಚಾನೆಲ್‌ಗಳ ಒಟ್ಟು 40 ಮತ್ತು ಇಂಗ್ಲಿಷ್ ಚಾನೆಲ್‌ಗಳ 47 ಆಂಕರ್‌ಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅವರಲ್ಲಿ ಒಬ್ಬರೂ ದಲಿತ, ಆದಿವಾಸಿ ಅಥವಾ ಒಬಿಸಿ ಇಲ್ಲ.
“ಸುದ್ದಿ ವಾಹಿನಿಗಳು ತಮ್ಮ ಪ್ರೈಮ್‌ಟೈಮ್ ಚರ್ಚಾ ಕಾರ್ಯಕ್ರಮಗಳಲ್ಲಿ ಶೇಕಡಾ 70ರಷ್ಟು ಮೇಲ್ಜಾತಿಗಳ ಪ್ಯಾನೆಲಿಸ್ಟ್‌ಗಳನ್ನು ಹೊಂದಿರುತ್ತವೆ. ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ ಒಟ್ಟು ಲೇಖನಗಳಲ್ಲಿ ದಲಿತರು ಮತ್ತು ಆದಿವಾಸಿಗಳು ಶೇಕಡಾ 5ಕ್ಕಿಂತ ಹೆಚ್ಚು ಬರೆಯುವುದಿಲ್ಲ. ಹಿಂದಿ ಪತ್ರಿಕೆಗಳು ಸ್ವಲ್ಪ ಉತ್ತಮವಾಗಿವೆ. ಸುಮಾರು 10 ಪ್ರತಿಶತದಷ್ಟು ದಲಿತ ಲೇಖಕರು ಬರೆಯುತ್ತಾರೆ” ಎಂಬುದನ್ನು ವರದಿ ಉಲ್ಲೇಖಿಸಿದೆ.
ಸುದ್ದಿ ವೆಬ್‌ಸೈಟ್‌ಗಳಲ್ಲಿ 72 ಪ್ರತಿಶತ ಲೇಖನಗಳನ್ನು ಮೇಲ್ಜಾತಿ ಜನರು ಬರೆದಿದ್ದಾರೆ. ಅಧ್ಯಯನಕ್ಕೆ ಒಳಪಡಿಸಲಾದ 12 ನಿಯತಕಾಲಿಕೆಗಳ ಕವರ್ ಪೇಜ್‌ನಲ್ಲಿ ಬಂದ 972 ಲೇಖನಗಳಲ್ಲಿ 10 ಮಾತ್ರ ಜಾತಿಗೆ ಸಂಬಂಧಿಸಿದ ವಿಷಯಗಳಾಗಿದ್ದವು.
ಮಾಧ್ಯಮ ಸಂಸ್ಥೆಗಳು ತಕ್ಷಣವೇ ನೇಮಕಾತಿ ರೀತಿಯಲ್ಲಿ ಗಮನಾರ್ಹವಾದ ಕೂಲಂಕಷ ಪರೀಕ್ಷೆಯನ್ನು ನಡೆಸಿಕೊಳ್ಳಬೇಕಿದೆ. ದೇಶಾದ್ಯಂತ ಸುದ್ದಿಮನೆಗಳು ಹೆಚ್ಚು ವೈವಿಧ್ಯಮಯವಾಗಿ, ಎಲ್ಲರನ್ನೂ ಒಳಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ತಾರತಮ್ಯ ಮತ್ತು ಅನ್ಯಾಯವಿಲ್ಲದೆ ಭಾರತವನ್ನು ಕಟ್ಟಲು ಇದು ಅಗತ್ಯವಾಗಿದೆ” ಎಂದಿದ್ದಾರೆ ಬೆಹರ್.
ವರದಿಯು ಸುಮಾರು 43 ಭಾರತೀಯ ಮುದ್ರಣ, ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳನ್ನು, ಅವುಗಳ ಕವರೇಜ್, ನಾಯಕತ್ವದ ಸಾಮಾಜಿಕ ಸ್ಥಾನಮಾನವನ್ನು, ಸಂಸ್ಥೆಗಳಿಂದ ನೇಮಕಗೊಂಡ ಪತ್ರಕರ್ತರ ಜಾತಿ ಹಿನ್ನೆಲೆಯನ್ನು ಅಧ್ಯಯನ ಮಾಡಿದೆ.
ಏಪ್ರಿಲ್ 2021 ಮತ್ತು ಮಾರ್ಚ್ 2022ರ ನಡುವೆ ನಡೆಸಲಾದ ಸಂಶೋಧನೆಯು ನಿಯತಕಾಲಿಕೆ ಮತ್ತು ದಿನಪತ್ರಿಕೆಗಳಲ್ಲಿ ಪ್ರಕಟವಾದ 20,000ಕ್ಕೂ ಹೆಚ್ಚು ಲೇಖನಗಳನ್ನು, 76 ಆಂಕರ್‌ಗಳು ಮತ್ತು 3,318 ಪ್ಯಾನೆಲಿಸ್ಟ್‌ಗಳ 2,075 ಪ್ರೈಮ್-ಟೈಮ್ ಚರ್ಚೆಗಳನ್ನು, 12 ತಿಂಗಳ ಆನ್‌ಲೈನ್ ಸುದ್ದಿ ವರದಿಗಳನ್ನು ವಿಶ್ಲೇಷಣೆ ಮಾಡಿದೆ.