

ವಿಜಯಪುರ(ಅ.12): ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಅಭ್ಯರ್ಥಿಗಳನ್ನು ಫೈನಲ್ ಮಾಡುವಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಇತರ ನಾನಾ ಪಕ್ಷಗಳು ಭಾರಿ ಕಸರತ್ತು ನಡೆಸುತ್ತಿರುವಾಗಲೇ ಆಮ್ ಆದ್ಮಿ ಪಕ್ಷ ಈಗಾಗಲೇ ಬಹಿರಂಗವಾಗಿ ಪ್ರಚಾರಕ್ಕಿಳಿದಿದೆ. ಸಾಮಾಜಿಕ ಜಾಲತಾಣಗಳನ್ನು ಯಥೇಚ್ಚವಾಗಿ ಬಳಸಿಕೊಂಡು ಪ್ರಚಾರದಲ್ಲಿ ಎಲ್ಲ ಪಕ್ಷಗಳಿಂದ ಒಂದು ಹೆಜ್ಜೆ ಮುಂದಿದೆ.
ವಿಜಯಪುರ ಮಹಾನಗರ ಪಾಲಿಕೆಯ ಒಟ್ಟು 35 ವಾರ್ಡ್ಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷ, ಎಐಎಂಐಎಂ, ಕೆಆರ್ಎಸ್ ಮುಂತಾದ ಪಕ್ಷಗಳು ಇನ್ನು ಟಿಕೆಟ್ ಫೈನಲ್ ಮಾಡಿ ಪಟ್ಟಿ ಬಿಡುಗಡೆ ಮಾಡಿಲ್ಲ. ಆದಾಗ್ಯೂ ಆಯಾ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಸಿಗುತ್ತದೆ ಎಂಬ ಆಶಾ ಭಾವನೆಯಿಂದ ಈಗಾಗಲೇ ಬಹುತೇಕ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಪ್ರಚಾರಕ್ಕಿಳಿದಿದ್ದಾರೆ. ಮನೆ ಮನೆಗೆ ತೆರಳಿ ಪ್ರಚಾರ ನಡೆಸುವುದು, ಬ್ಯಾನರ್, ಪೋಸ್ಟರ್ ಹಚ್ಚುವುದು, ಕರಪತ್ರ ಹಂಚುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಆಮ್ ಆದ್ಮಿ ಪಕ್ಷ ಪಾಲಿಕೆಯ ಎಲ್ಲ 35 ವಾರ್ಡ್ಗಳಲ್ಲಿ ತನ್ನ ಅಭ್ಯರ್ಥಿ ಕಣಕ್ಕಿಳಿಸಲು ಸಮರ್ಥ ಹಾಗೂ ಅರ್ಹ ಅಭ್ಯರ್ಥಿಗಳನ್ನು ಹುಡುಕಲು ಪ್ರತಿ ವಾರ್ಡ್ಗೆ ತೆರಳಿ ಸಮೀಕ್ಷೆ ನಡೆಸಿದ್ದಾರೆ. ನಾಳೆ, ನಾಡಿದ್ದು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ತರಾತುರಿಯಲ್ಲಿದೆ. ಇದರ ಜೊತೆ ಜೊತೆಯಲ್ಲಿಯೇ ಆಮ್ ಆದ್ಮಿ ಪಕ್ಷ ಬರೀ ಅಭ್ಯರ್ಥಿಗಳ ಅನ್ವೇಷಣೆಗಷ್ಟೇ ತನ್ನ ಕಾರ್ಯಕ್ಷೇತ್ರವನ್ನು ಸೀಮಿತಗೊಳಿಸಿಕೊಂಡಿಲ್ಲ. ಅದು ಈಗಾಗಲೇ ಪ್ರಚಾರ ಭರಾಟೆಯಲ್ಲಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಉಳಿದೆಲ್ಲ ಪಕ್ಷಗಳಿಗಿಂತಲೂ ಪ್ರಚಾರದಲ್ಲಿ ಆಮ್ ಆದ್ಮಿ ಪಕ್ಷ ಒಂದು ಹೆಜ್ಜೆ ಮುಂದಿದೆ.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪ್ರಥ್ವಿರೆಡ್ಡಿ ಹಾಗೂ ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ, ಚಿತ್ರನಟ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದಲ್ಲಿ ಒಂದಜು ತಂಡ ಎಲ್ಲ ವಾರ್ಡ್ಗಳಲ್ಲಿ ಸಂಚರಿಸಿ ಮೊದಲ ಹಂತದ ಪ್ರಚಾರ ಕಾರ್ಯ ಮುಗಿಸಿದೆ. ಮುಖ್ಯಮಂತ್ರಿ ಚಂದ್ರ ಅವರ ತಂಡ ಮತ್ತೆ ಎರಡನೆ ಬಾರಿಗೆ ವಿಜಯಪುರ ನಗರಕ್ಕೆ ಆಗಮಿಸಿ ಎಲ್ಲ ವಾರ್ಡ್ಗಳಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳುವ ಕಾರ್ಯಕ್ರಮ ನಿಗದಿಪಡಿಸಿದೆ. ಇದಲ್ಲದೆ ಪಾಲಿಕೆಯ 35 ವಾರ್ಡ್ಗಳಲ್ಲಿ ಆಮ್ ಆದ್ಮಿ ಪಕ್ಷದ ಸುಮಾರು 8 ಮಂದಿ ಕಾರ್ಯಕರ್ತರ ತಂಡ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಮತದಾರರ ಮನಸ್ಸಿಗೆ ನಾಟುವಂತೆ ತಮ್ಮ ಪಕ್ಷದ ಬಗ್ಗೆ ಮನವರಿಕೆ ಮಾಡುವಲ್ಲಿ ತಲ್ಲೀಣವಾಗಿದೆ.
ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ, ಚಿತ್ರನಟ ಮುಖ್ಯಮಂತ್ರಿ ಚಂದ್ರು ಅವರ ಧ್ವನಿ ಸುರಳಿ ಮನವಿಯನ್ನು ಮೊಬೈಲ್ಗಳಲ್ಲಿ ಸಂದೇಶ ಕಳುಹಿಸಲಾಗುತ್ತಿದೆ. ಈಗಾಗಲೇ ಒಂದೂವರೆಯಿಂದ ಎರಡು ಲಕ್ಷಗಳ ವರೆಗೆ ಮೊಬೈಲ್ ಸಂದೇಶಗಳನ್ನು ಮತದಾರರಿಗೆ ರವಾನಿಸಲಾಗಿದೆ. ಸೋಸಿಯಲ್ ಮಿಡಿಯಾದಲ್ಲಿ ಪ್ರತಿಯೊಂದು ವಾರ್ಡ್ಗಳಲ್ಲಿ ಇರುವ ಸಮಸ್ಯೆಗಳ ದೃಶ್ಯಗಳನ್ನು ಚಿತ್ರೀಕರಣ ಮಾಡಿ ಜನತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಸಲುವಾಗಿ ಚಿತ್ರೀಕರಣ ತಂಡ ಈಗಾಗಲೇ ವಿಜಯಪುರ ನಗರಕ್ಕೆ ಕಾಲಿಟ್ಟಿದೆ.
ಆಮ್ ಆದ್ಮಿ ಪಕ್ಷ ಸಂಜೆ ಹೊತ್ತಿನಲ್ಲಿ ಪಕ್ಷದ ಚಿಹ್ನೆ ಹೊಂದಿದ ಸ್ಟ್ಯಾಂಡಿ ವಾಹನದಲ್ಲಿ ಬರುತ್ತದೆ. ಅದರಲ್ಲಿ ಇಬ್ಬರು ಕಾರ್ಯಕರ್ತರು ಪಕ್ಷದ ಚಿಹ್ನೆ ಹಿಡಿದುಕೊಂಡು ನಿಂತು ಜನರ ಗಮನ ಸೆಳೆಯಲಿದ್ದಾರೆ. ಬಜ್ ಕ್ಯಾಂಪಿಯನ್ ಪ್ರಯೋಗ ಮಾಡಲು ಆಮ್ ಆದ್ಮಿ ಪಕ್ಷ ಸಜ್ಜಾಗಿದೆ. ವಿಜಯಪುರ ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಜನನಿಬಿಡ 15 ಪ್ರದೇಶಗಳನ್ನು ಆಮ್ ಆದ್ಮಿ ಪಕ್ಷ ಗುರುತಿಸಿದೆ. ಈ ಸ್ಥಳಗಳಲ್ಲಿ ಸುಮಾರು 10 ಪಕ್ಷದ ಕಾರ್ಯಕರ್ತರು ಪಕ್ಷದ ಬ್ಯಾನರ್, ಪೋಸ್ಟರ್, ಧ್ವಜ ಹಿಡಿದುಕೊಂಡು ನಿಂತು ಜನರಿಗೆ ಮತ ಚಲಾಯಿಸಲು ಕೋರುವ ಮೂಲಕ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ.