

ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹಾಗೂ ಸಂಸದ ಡಿಕೆ ಸುರೇಶ್ ಅವರ ಜಾರಿ ನಿರ್ದೇಶನಾಲಯದ(ಇಡಿ) ವಿಚಾರಣೆ ಅಂತ್ಯವಾಗಿದೆ. ಯಂಗ್ ಇಂಡಿಯಾ ಹಣಕಾಸು ವ್ಯವಹಾರದ ಬಗ್ಗೆ ಇಡಿ ಅಧಿಕಾರಿಗಳು ಸಹೋದರರನ್ನು ಇಂದು(ಅ.07) ಪ್ರತ್ಯೇಕವಾಗಿ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ಮುಗಿಸಿಕೊಂಡು ಡಿಕೆ ಶಿವಕುಮಾರ್ ಹೊರಬರುತ್ತಿದ್ದಂತೆಯೇ ಟ್ವಿಟ್ಟರ್ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ರಾಜಕೀಯ ಕದನಗಳನ್ನು ರಾಜಕೀಯ ರಣರಂಗದಲ್ಲಿಯೇ ನಡೆಸಬೇಕು. BJP ತನ್ನ ರಾಜಕೀಯ ಎದುರಾಳಿಗಳಿಗೆ ಕಿರುಕುಳ ನೀಡಿ, ಬೆದರಿಸಲು ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ. ಇದಕ್ಕೆ ಮೇ 2023 ರಲ್ಲಿ ರಾಜ್ಯದ ಜನರೇ ಉತ್ತರ ನೀಡಲಿದ್ದಾರೆ. ED ಮೂಲಕ ನಿರುದ್ಯೋಗ, ಬೆಲೆ ಏರಿಕೆಯನ್ನು ನಿಗ್ರಹಿಸಲು ಸಾಧ್ಯವಿಲ್ಲ ಎನ್ನುವುದು BJPಗೆ ಅರಿವಾಗಬೇಕಿದೆ ಎಂದು ಕಿಡಿಕಾರಿದ್ದಾರೆ.
ಯಂಗ್ ಇಂಡಿಯಾ ಸಂಸ್ಥೆಗೆ 25 ಲಕ್ಷ ರೂ. ದೇಣಿಗೆ ನೀಡಿದ್ದೆ. ಅದರ ಬಗ್ಗೆ ವಿಚಾರಣೆ ವೇಳೆ ಮಾಹಿತಿ ನೀಡಿದ್ದೇನೆ. ನಮ್ಮ ಕಂಪನಿಗಳಿಗೆ ಸೇರಿದ ಮತ್ತಷ್ಟು ದಾಖಲೆ ನೀಡಲು ಕೇಳಿದ್ದು, ದಾಖಲೆಗಳನ್ನು ನೀಡಲು ಕಾಲಾವಕಾಶ ಕೇಳಿದ್ದಕ್ಕೆ ಒಪ್ಪಿದ್ದಾರೆ. ಡಿಕೆಶಿ ಹಾಗೂ ನನ್ನನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ಮತ್ತೆ ಅಗತ್ಯ ಬಿದ್ದರೆ ವಿಚಾರಣೆಗೆ ಕರೆದರೆ ಬರುವಂತೆ ಸೂಚನೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಇದೀಗ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರು ಬೆಂಗಳೂರಿಗೆ ವಾಪಸ್ ಆಗಲು ನೇರವಾಗಿ ಇಡಿ ಕಚೇರಿಯಿಂದ ದೆಹಲಿ ಏರ್ಪೋರ್ಟ್ಗೆ ತೆರಳಿದರು.
ಎರಡನೇ ಸಮನ್ಸ್ ನೀಡಿದ್ದ ಇಡಿ
ಯೆಸ್….ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯುಸಿಯಾಗಿದ್ದ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಸುರೇಶ್ಗೆ ವಿಚಾರಣೆ ಬರುವಂತೆ ಇಡಿ ಸಮನ್ಸ್ ನೀಡಿತ್ತು. ಆದ್ರೆ, ಸಧ್ಯಕ್ಕೆ ವಿಚಾರಣೆ ಬರಲು ಆಗುವುದಿಲ್ಲ. ಮುಂದೊಂದು ದಿನ ಬರುವುದಾಗಿ ಡಿಕೆ ಬ್ರದರ್ಸ್ ಇಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದ್ರೆ, ಇಡೀ ಡಿಕೆ ಸಹೋದರರ ಮನವಿಗೆ ಒಪ್ಪದೇ ಅಕ್ಟೋಬರ್. 7ರಂದು ವಿಚಾರಣೆ ಹಾಜರಾಗಲೇಬೇಕೆಂದು ಮತ್ತೊಂದು ಸಮನ್ಸ್ ಜಾರಿ ಮಾಡಿತ್ತು. ಇದರಿಂದ ಅನಿವಾರ್ಯವಾಗಿ ಡಿಕೆಶಿ ಹಾಗೂ ಸುರೇಶ್ ನಿನ್ನೆ (ಅ.06) ರಾತ್ರಿಯೇ ದೆಹಲಿಗೆ ತೆರಳಿದ್ದರು.