

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದುರ್ಗಾ ವಿಗ್ರಹದ (Durga Idol) ವಿಸರ್ಜನೆ ವೇಳೆ ಪ್ರವಾಹದಲ್ಲಿ ಸಿಲುಕಿ 8 ಜನ ಸಾವನ್ನಪ್ಪಿದ್ದಾರೆ. ಜಲ್ಪೈಗುರಿಯಲ್ಲಿ ಮಾಲ್ ನದಿ ಪ್ರವಾಹಕ್ಕೆ ಸಿಲುಕಿ 8 ಜನರು ಬಲಿಯಾಗಿದ್ದಾರೆ. ನದಿಯ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ 70 ಜನರ ರಕ್ಷಣೆ ಮಾಡಲಾಗಿದೆ. ಈ ದುರಂತದಲ್ಲಿ 13 ಜನರಿಗೆ ಗಾಯಗಳಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಮಾಲ್ ನದಿ ಪ್ರವಾಹದಲ್ಲಿ ಸಿಲುಕಿ ಇನ್ನೂ 30-40 ಜನರು ನಾಪತ್ತೆಯಾಗಿದ್ದಾರೆ. ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಏಕಾಏಕಿ ಪ್ರವಾಹ (Flood) ಉಂಟಾಗಿದ್ದರಿಂದ ಈ ದುರಂತ ಸಂಭವಿಸಿದೆ. ಈ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಸಂತಾಪ ವ್ಯಕ್ತಪಡಿಸಿದ್ದಾರೆ.
ನಿನ್ನೆ ರಾತ್ರಿ ದುರ್ಗಾ ಮಾತೆ ವಿಗ್ರಹಗಳ ವಿಸರ್ಜನೆ ವೇಳೆ ಈ ಘಟನೆ ನಡೆದಿದ್ದು, ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ. ನಿನ್ನೆ ಸಂಜೆ ದುರ್ಗಾ ವಿಗ್ರಹದ ವಿಸರ್ಜನೆಗೆ ನೂರಾರು ಜನರು ನದಿಯ ದಡದಲ್ಲಿ ಜಮಾಯಿಸಿದ್ದರು. ಆಗ ಇದ್ದಕ್ಕಿದ್ದಂತೆ ಹಠಾತ್ ಪ್ರವಾಹ ಅಪ್ಪಳಿಸಿತು. ಅದರಲ್ಲಿ ಜನರು ಕೊಚ್ಚಿಹೋದರು. ಇದುವರೆಗೆ 8 ಶವಗಳನ್ನು ಹೊರತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಸಣ್ಣಪುಟ್ಟ ಗಾಯಗಳಾಗಿರುವ 13 ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಸ್ಥಳೀಯ ಆಡಳಿತದ ತಂಡಗಳು ನಾಪತ್ತೆಯಾದವರಿಗಾಗಿ ಶೋಧ ನಡೆಸುತ್ತಿವೆ ಎಂದಿದ್ದಾರೆ.