
ಕೃಪೆ :ನಾನು ಗೌರಿ
ಹೀಗೆ ಮಾಡುವುದಾದರೆ ಹೊರಗಿನ ಎಲ್ಲಾ ಸಂಸ್ಥೆಗಳನ್ನು ಸರ್ಕಾರಿ ಶಾಲೆಗಳಲ್ಲಿ ನಿಷೇಧ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು
ಪ್ರವಾದಿ ಮುಹಮ್ಮದ್ (ಸ. ಅ )ರವರ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದ್ಧ ಗದಗದ ನಾಗಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತು ಮಾಡಿರುವ ಶಿಕ್ಷಣ ಇಲಾಖೆಯ ನಿರ್ಧಾರವನ್ನು ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ ಅವರು ವಿರೋಧಿಸಿದ್ದು, “ಅಮಾನತು ರೀತಿಯ ಕಠಿಣ ಶಿಕ್ಷೆ ನೀಡುವ ಅಗತ್ಯವಿರಲಿಲ್ಲ. ಶಿಕ್ಷಕರನ್ನು ಅಮಾನತ್ತಿನಲ್ಲಿ ಇಡುವಂತಹ ದೊಡ್ಡ ತಪ್ಪು ಅವರೇನು ಮಾಡಿಲ್ಲ” ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ,“ಸರ್ವ ಧರ್ಮ ಸಮನ್ವಯತೆ ಎಂಬಂತೆ ಮಕ್ಕಳು ಎಲ್ಲರ ಬಗ್ಗೆಯೂ ತಿಳಿದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ಈಗ ಅದನ್ನು ವ್ಯಾಖ್ಯಾನಿಸುವ ರೀತಿಯಲ್ಲಿ ತಪ್ಪುಗಳಾಗುತ್ತಿವೆ. ಎಲ್ಲವನ್ನೂ ತಮ್ಮದೆ ದೃಷ್ಟಿಕೋನದಿಂದ ನೋಡುತ್ತಿರುವುದರಿಂದ ಎಲ್ಲವೂ ತಪ್ಪಾಗಿ ಕಾಣುತ್ತದೆ. ಶಿಕ್ಷಣದ ಎಲ್ಲವನ್ನೂ ಕೋಮುವಾದೀಕರಣ ಮಾಡಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಧರ್ಮವನ್ನು ಪ್ರಚಾರ ಮಾಡುವ ಯಾವುದೆ ಆಲೋಚನೆ ನನಗೆ ಇಲ್ಲ ಎಂದು ಮುಖ್ಯೋಪಾಧ್ಯಾಯರು ಈಗಾಗಲೆ ಸ್ಪಷ್ಟವಾಗಿ ಹೇಳಿದ್ದಾರೆ. ಒಂದು ಪುಸ್ತಕ ಕೊಟ್ಟ ಕೂಡಲೇ ಇಸ್ಲಾಂ ಪ್ರಚಾರ ಆಗುತ್ತದೆಯೆ?” ಎಂದು ಅವರು ಕೇಳಿದರು.
ಮುಂದಕ್ಕೆ ಶಾಲೆಯಲ್ಲಿ ಭಗವದ್ಗೀತೆ ಕೊಟ್ಟರೆ ಅದರ ಅರ್ಥ ಹಿಂದೂ ಧರ್ಮಕ್ಕೆ ಮಕ್ಕಳನ್ನು ಮತಾಂತರ ಮಾಡುತ್ತಿದ್ದೇವೆ ಎಂದೇ? ಲಕ್ಷಾಂತರ ವಿದ್ಯಾರ್ಥಿಗಳು ಕ್ರಿಶ್ಚಿಯನ್ ಕಾನ್ವೆಂಟ್ಗಳಲ್ಲಿ ಕಲಿಯುತ್ತಾ ಇದ್ದಾರೆ. ಅವರೆಲ್ಲರೂ ಮತಾಂತರವಾದರೆ?” ಎಂದು ಅವರು ಪ್ರಶ್ನಿಸಿದರು.
“ಇದು ಬಹಳ ವ್ಯವಸ್ಥಿತವಾಗಿ ಒಂದು ಧರ್ಮದ ಶಿಕ್ಷಕರನ್ನು ಗುರಿ ಮಾಡುತ್ತಿರುವ ತಂತ್ರ. ಅಲ್ಲದೆ ಈ ಪೊಲೀಸ್ಗಿರಿ ಬಹಳ ಅಪಾಯಕಾರಿಯಾಗಿದ್ದು, ಭಯದ ವಾತಾವರಣ ನಿರ್ಮಾಣ ಮಾಡುವ ಸ್ಥಿತಿ ಇದು. ಇದರ ಪರಿಣಾಮ ನಮ್ಮ ಮಕ್ಕಳು ಅನುಭವಿಸಬೇಕಾಗುತ್ತದೆ. ಶಿಕ್ಷಣದ ವಿಚಾರಗಳಲ್ಲಿ ಸರಿ ತಪ್ಪುಗಳನ್ನು ಶಾಲೆಗೆ ಬಿಟ್ಟು ಬಿಡಬೇಕು” ಎಂದು ಅವರು ಹೇಳಿದರು.
“ಅಕಸ್ಮಾತ್ ಶಿಕ್ಷಕ ಮಾಡಿದ್ದು ತಪ್ಪು ಎಂದಾದರೂ, ಅವರನ್ನು ಅಮಾನತು ರೀತಿ ಕಠಿಣ ಶಿಕ್ಷೆ ನೀಡುವ ಅಗತ್ಯವಿರಲಿಲ್ಲ. ಶಿಕ್ಷಕರನ್ನು ಅಮಾನತ್ತಿನಲ್ಲಿ ಇಡುವಂತಹ ದೊಡ್ಡ ತಪ್ಪು ಅವರೇನು ಮಾಡಿಲ್ಲ” ಎಂದು ನಿರಂಜನಾರಾಧ್ಯ ಅವರು ತಿಳಿದರು.
ಇಸ್ಲಾಂನ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗದಗ ಜಿಲ್ಲೆಯ ನಾಗಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ, ಬಲಪಂಥೀಯ ಸಂಘಟನೆಯಾದ ಶ್ರೀರಾಮಸೇನೆಯ ಕಾರ್ಯಕರ್ತರು 172 ವಿದ್ಯಾರ್ಥಿಗಳಿರುವ ಶಾಲೆಗೆ ಅಕ್ರಮವಾಗಿ ನುಗ್ಗಿ ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫರ್ ಅವರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ನಂತರ ಸಾರ್ವಜನಿಕ ಶಿಕ್ಷಣ ಇಲಾಖೆಯು ಮುಖ್ಯೋಪಾಧ್ಯರನ್ನು ಅಮಾನತುಗೊಳಿಸಿ ಆದೇಶಿಸಿದೆ ಎಂದು ವರದಿಯಾಗಿದೆ.
ಶಿಕ್ಷಕ ವೃತ್ತಿಯಲ್ಲಿ 28 ವರ್ಷಗಳ ಅನುಭವ ಹೊಂದಿರುವ ನಾನು ಕಳೆದ ಮೂರು ವರ್ಷಗಳಿಂದ ಈ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹಿಂದೂ ವ್ಯಕ್ತಿಗಳು ಮತ್ತು ಇತರರಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಎಲ್ಲ ದಾಖಲೆಗಳನ್ನು ನಾನು ನಿರ್ವಹಿಸಿದ್ದೇನೆ. ನನ್ನೊಂದಿಗೆ ಕೆಲಸ ಮಾಡುವ ಏಳು ಶಿಕ್ಷಕರಿದ್ದು, ಅದೃಷ್ಟವಶಾತ್ ಅವರು ನನ್ನ ರಕ್ಷಣೆಗೆ ಬಂದರು” ಎಂದು ದಾಳಿಗೆ ಒಳಗಾಗಿರುವ ಅಬ್ದುಲ್ ಮುನಾಫರ್ ಪ್ರತಿಕ್ರಿಯಿಸಿದ್ದಾರೆ.