

ನವದೆಹಲಿ (ಸೆ. 28): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸೇರಿದಂತೆ ಅದರ ಎಂಟು ಮಿತ್ರ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ,
ನಿಷೇಧವನ್ನು ಸಮರ್ಥಿಸಿಕೊಳ್ಳುವಲ್ಲಿ ಕಾನೂನು ತಂತ್ರವನ್ನೂ ಸರ್ಕಾರ ಎದುರಿಸಬೇಕಾಗುತ್ತದೆ. ಈ ಸಂಘಟನೆಗಳು ಕೆಲವೇ ದಿನಗಳಲ್ಲಿ ನಿಷೇಧದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ. ಅದಕ್ಕಾಗಿ ಸರ್ಕಾರದ ಅಧಿಸೂಚನೆಯನ್ನು ಅಮೂಲಾಗ್ರವಾಗಿ ಪರಿಶೀಲನೆ ಮಾಡುವ ಹಂತದಲ್ಲಿದೆ. ಕೇಂದ್ರ ಗೃಹ ಸಚಿವಾಲಯವು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಪಿಎಫ್‌ಐ ಸೇರಿದಂತೆ ಒಂಬತ್ತು ಸಂಘಟನೆಗಳನ್ನು ಬ್ಯಾನ್ ಮಾಡಿದೆ. ನಿಷೇಧಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ನ್ಯಾಯಮಂಡಳಿಗೆ ಕಳುಹಿಸಲಾಗುವುದು ಎಂದು ಕಾನೂನು ಪ್ರಕ್ರಿಯೆ ತಜ್ಞರು ಹೇಳಿದ್ದಾರೆ. ಅದರ ಕಾನೂನುಬದ್ಧತೆಯನ್ನು ಪರಿಗಣಿಸಿದ ನಂತರ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಯುಎಪಿಎ ಸೆಕ್ಷನ್ 4ರ ಅಡಿಯಲ್ಲಿ 30 ದಿನಗಳ ಒಳಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ನ್ಯಾಯಮಂಡಳಿಗೆ ಕೇಂದ್ರ ಸರ್ಕಾರವು ಈ ಅಧಿಸೂಚನೆಯನ್ನು ಕಳುಹಿಸುವ ಅಗತ್ಯವಿದೆ. ಇದು ದೇಶಾದ್ಯಂತ ಪಿಎಫ್‌ಐ ಮತ್ತು ಅದರ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಎನ್‌ಐಎ, ಇಡಿ ಮತ್ತು ರಾಜ್ಯ ಪೊಲೀಸರು ದಾಖಲಿಸಿರುವ ಎಲ್ಲಾ ಪ್ರಕರಣಗಳ ವಿವರಗಳನ್ನು ಒಳಗೊಂಡಿರುತ್ತದೆ.
ಗೃಹ ವ್ಯವಹಾರಗಳ ಸಚಿವಾಲಯವು ಪಿಎಫ್‌ಐ ಕುರಿತು ವಿವರವಾದ ಟಿಪ್ಪಣಿಯನ್ನು ಯುಎಪಿಎ ನ್ಯಾಯಮಂಡಳಿಗೆ ಸಲ್ಲಿಸಬಹುದು. ಈ ಸಂಘಟನೆಯು ಹೇಗೆ, ಯಾಕೆ ನಿಷೇಡಿಸಿದ್ದೇವೆ
ಎನ್ನುವುದನ್ನು ತಿಳಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಬಂಧಗಳು, ಕಾನೂನುಬಾಹಿರ ಚಟುವಟಿಕೆಗಳು ಮತ್ತು ಕಾನೂನುಗಳ ಉಲ್ಲಂಘನೆಗಳ ಪುರಾವೆಗಳನ್ನು ನ್ಯಾಯಮಂಡಳಿಯ ಮುಂದೆ ಇಡಬೇಕಾಗುತ್ತದೆ .ಪಿಎಫ್‌ಐಗೆ ನೋಟಿಸ್ ನೀಡಲಿದೆ ನ್ಯಾಯಮಂಡಳಿ: ಈ ವಿಷಯವನ್ನು ನ್ಯಾಯಮಂಡಳಿಗೆ (Unlawful Activities Prevention Tribunal ) ತಿಳಿಸಿದಾಗ, ಅದು ಲಿಖಿತವಾಗಿ ಪ್ರತಿಕ್ರಿಯಿಸುವಂತೆ ಪಿಎಫ್‌ಐಗೆ ಶೋಕಾಸ್ ನೋಟಿಸ್ ನೀಡಲಿದೆ. ಸಂಘಟನೆಯನ್ನು ಏಕೆ ನಿಷೇಧಿಸಬಾರದು ಎಂದೂ ಪ್ರಶ್ನೆ ಮಾಡಲಾಗುತ್ತದೆ. ಎರಡೂ ಪಕ್ಷಗಳ ವಾದಗಳ ಆಧಾರದ ಮೇಲೆ, ಪಿಎಫ್‌ಐ ಅನ್ನು ಕಾನೂನುಬಾಹಿರವೆಂದು ಘೋಷಿಸಲು ಸಾಕಷ್ಟು ಪುರಾವೆಗಳಿವೆಯೇ ಎಂದು ನಿರ್ಧರಿಸಲು ನ್ಯಾಯಮಂಡಳಿಯು ವಿಚಾರಣೆಯನ್ನೂ ನಡೆಸಬಹುದು.