
ದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Pupular Front of India – PFI) ಹಾಗೂ ಅದರ ಸಹವರ್ತಿ ಸಂಘಟನೆಗಳು ಅಥವಾ ಅಧೀನ ಸಂಘಟನೆಗಳನ್ನು ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ನಿಷೇಧಿಸಿದೆ. ಈ ಸಂಘಟನೆಗಳನ್ನು ‘ಕಾನೂನು ಬಾಹಿರ’ ಎಂದು ಘೋಷಿಸಿದೆ. ಕೇಂದ್ರ ಸರ್ಕಾರದ ಮೂಲಗಳನ್ನು ಆಧರಿಸಿದ ಎಎನ್ಐ ಸುದ್ದಿ ಸಂಸ್ಥೆಯು ಈ ಸಂಬಂಧ ಟ್ವೀಟ್ ಮಾಡಿದೆ.
ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ರಾಷ್ಟ್ರೀಯ ತನಿಖಾ ದಳ (National Investigation Agency – NIA) ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ ಪಿಎಫ್‌ಐ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ್ದರು. ನೂರಾರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ದಾಳಿಯ ಬೆನ್ನಿಗೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾಗ ಅಜಿತ್ ದೋವಲ್ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದ್ದರು. ವಿವಿಧ ಭದ್ರತಾ ಏಜೆನ್ಸಿಗಳ ಮುಖ್ಯಸ್ಥರು ಪಾಲ್ಗೊಂಡಿದ್ದ ಸಭೆಯಲ್ಲಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
ಪಿಎಫ್‌ಐ ಅಂಗ ಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಕೇರಳವನ್ನು ನಿಷೇಧಿಸಲಾಗಿದೆ.