

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ (Rajasthan CM) ಅಶೋಕ್ ಗೆಹ್ಲೋಟ್ (Ashok Gehlot) ಅವರು ಕಾಂಗ್ರೆಸ್ನ ಅಧ್ಯಕ್ಷೀಯ ಚುನಾವಣೆಗೆ ನಿಲ್ಲುವುದಾಗಿ ತಿಳಿಸಿರುವುದರೊಂದಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆಯೂ ಸುಳಿವು ನೀಡಿದ್ದಾರೆ. ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪಕ್ಷದಲ್ಲಿ ಭಾರೀ ಬಿಕ್ಕಟ್ಟು ಉಂಟಾಗಿದ್ದು, ಗೆಹ್ಲೋಟ್ ಬಣದ 90ಕ್ಕೂ ಹೆಚ್ಚು ಶಾಸಕರು (MLA) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೈಡ್ರಾಮಾ ಪ್ರಾರಂಭಿಸಿದ್ದಾರೆ.
ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಮುಖ್ಯಸ್ಥರಾಗಿ ಆಯ್ಕೆಯಾದರೆ ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಸ್ಥಾನವನ್ನು ಹೊಸ ತಲೆಮಾರಿನವರಿಗೆ ಕೊಡಬೇಕೆಂದು ಹೇಳಿದ್ದರು. ಈ ಕಾರಣಕ್ಕೆ ಸಚಿನ್ ಪೈಲಟ್ (Sachin Pilot) ಅವರಿಗೆ ಸಿಎಂ ಪಟ್ಟ ಸಿಗುವ ಸಾಧ್ಯತೆ ಇತ್ತು.

ಸಚಿನ್ ಪೈಲಟ್ ಅವರಿಗೆ ಸಿಎಂ ಸ್ಥಾನ ನೀಡುವುದನ್ನು ಧಿಕ್ಕರಿಸಿ ಇದೀಗ ಗೆಹ್ಲೋಟ್ ಬಣದ ಶಾಸಕರು ಹೈಡ್ರಾಮಾ ನಡೆಸಿದ್ದಾರೆ. ಸಚಿನ್ ಪೈಲಟ್ ಅವರಿಗೆ ಸಿಎಂ ಸ್ಥಾನವನ್ನು ನೀಡುವ ಬದಲು ನಮ್ಮಲ್ಲಿಯೇ ಯಾರಾದರೂ ಅನುಭವಿ ರಾಜಕಾರಣಿಗಳಿಗೆ ಸಿಎಂ ಸ್ಥಾನ ನೀಡಿ ಎಂದು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಇದಾಗದೇ ಹೋದಲ್ಲಿ ಹಲವು ಶಾಸಕರು ಕಾಂಗ್ರೆಸ್ ತೊರೆಯುವುದಾಗಿಯೂ ಹೈಕಮಾಂಡ್ಗೆ ಎಚ್ಚರಿಕೆ ನೀಡಿದ್ದಾರೆ.
ರಾಜಸ್ಥಾನದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ನಡೆಸಲು ನಿರ್ಣಾಯಕ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯನ್ನು ಹೈಕಮಾಂಡ್ ಕರೆಸಿತ್ತು. ಆದರೆ ಇದೀಗ ಶಾಸಕರು ನಡೆಸುತ್ತಿರುವ ಹೈಡ್ರಾಮಾದ ಹಿನ್ನೆಲೆ ಸಭೆಯನ್ನೇ ರದ್ದುಗೊಳಿಸಲಾಗಿದೆ.