

ಮಂಗಳೂರು: ಕಾಂಗ್ರೆಸ್ ಅವಧಿಯಲ್ಲಿ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರನ್ನು ಪೋಷಿಸಿದ್ದಾರೆ ಎಂದು ಆರೋಪಿಸುವ ಬಿಜೆಪಿಯು ಸಾಕ್ಷ್ಯಾಧಾರಗಳನ್ನು ತೋರಿಸಲಿ. ಸಾಕ್ಷ್ಯಾಧಾರವಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್ ಸವಾಲು ಹಾಕಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಅವಧಿಯಲ್ಲಿ ಪಿಎಫ್‌ಐ ಸಂಘಟನೆಯನ್ನು ಪೋಷಿಸಲಾಗಿದೆ ಎನ್ನುವ ಬಿಜೆಪಿಗರು ತನಿಖೆ ನಡೆಸಲಿ. ಯಾವುದೇ ಸಾಕ್ಷ್ಯಾಧಾರವಿದ್ದರೆ ಬಹಿರಂಗಪಡಿಸಲಿ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಯಾವುದೇ ಸಂಘಟನೆಯ ವಿರುದ್ಧ ಸರಿಯಾದ ಸಾಕ್ಷ್ಯಾಧಾರವಿದ್ದರೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ. ಯಾವುದೇ ತಾರತಮ್ಯವಿಲ್ಲದೇ ಅಂತಹವರ ವಿರುದ್ಧ ಕ್ರಮಕೈಗೊಳ್ಳಲಿ ಎಂದರು.
ಪೇಸಿಎಂ ಪೋಸ್ಟರ್ ಅಂಟಿಸುವ ಅಭಿಯಾನದ ಕುರಿತು ಮಾತನಾಡಿದ ಯು.ಟಿ ಖಾದರ್ ಈ ಅಭಿಯಾನ ನಾವು ಮಾಡಿದ್ದೇವೆ. ಕಾಂಗ್ರೆಸ್‌ನವರು ಮಾಡಿದರೆ ತಪ್ಪು, ಬಿಜೆಪಿಯವರು ಸಾಮಾಜಿಕ ಜಾಲತಾಣಗಳಲ್ಲಿ ಏನು ಬೇಕಾದರೂ ಹಾಕಬಹುದಾ? ರಾಹುಲ್ ಗಾಂಧಿ, ಸೋನಿಯಾ, ಸಿದ್ದರಾಮಯ್ಯ ಅವರು ಬಗ್ಗೆ ಇವರು ಏನೇನೂ ಹಾಕಿಲ್ವಾ? ಆಗ ಯಾಕೆ ತನಿಖೆ ಮಾಡಿಲ್ಲ. ಆ ಬಗ್ಗೆಯೂ ತನಿಖೆ ಆಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.