

ಮುಂಬೈ (ಸೆ.23): ಡಾಲರ್ ಎದುರು ರೂಪಾಯಿ ಮೌಲ್ಯ ಇನ್ನೊಮ್ಮೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದು, ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 81.09 ತಲುಪಿದೆ. ಅಮೆರಿಕದ ಟ್ರೆಷರ್ ಯೀಲ್ಡ್ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿರುವ ಜೊತೆಗೆ ಆಮದುದಾರರಿಂದ ಡಾಲರ್ ಗೆ ಬೇಡಿಕೆ ಹೆಚ್ಚಳವಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಕರೆನ್ಸಿಯ ಬಲ, ದೇಶೀಯ ಷೇರುಗಳಲ್ಲಿನ ನಕಾರಾತ್ಮಕ ಪ್ರವೃತ್ತಿ ಕೂಡ ಈ ಬೆಳವಣಿಗೆಗೆ ಕಾರಣವಾಗಿರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ. ನಿನ್ನೆ (ಗುರುವಾರ) ಕೂಡ ಡಾಲರ್ ಮೌಲ್ಯ ತೀವ್ರ ಏರಿಕೆಯಾದ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ದಾಖಲೆಯ ಕನಿಷ್ಠ ಮಟ್ಟ 81 ರೂ.ಗೆ ಕುಸಿತ ಕಂಡಿತ್ತು. ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರವನ್ನು ಶೇ.0.75ರಷ್ಟು ಹೆಚ್ಚಿಸಿದೆ. ಇದ್ರಿಂದ ಒಟ್ಟು ಬಡ್ಡಿದರ ಶೇ.3.25ಗೆ ಹೆಚ್ಚಳವಾಗಿದೆ. ಇದ್ರಿಂದ ಹೂಡಿಕೆದಾರರಿಗೆ ಹೂಡಿಕೆ ಮೇಲಿನ ಆಸಕ್ತಿ ತಗ್ಗಿದೆ. ಅಮೆರಿಕ ಡಾಲರ್ ಮೌಲ್ಯ 20 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.ನಿನ್ನೆಯ ಬೆಳವಣಿಗೆ ಇಂದು ಕೂಡ ಮುಂದುವರಿದಿದ್ದು, ಡಾಲರ್ ಎದುರು ರೂಪಾಯಿ 81.09ಕ್ಕೆ ಕುಸಿತ ಕಂಡಿದೆ.
ಗುರುವಾರ ಭಾರತೀಯ ಕರೆನ್ಸಿ ಕಳೆದ ಆರು ತಿಂಗಳಲ್ಲೇ ಒಂದು ದಿನದಲ್ಲಿ ಭಾರೀ ಕುಸಿತ ದಾಖಲಿಸಿದೆ. ಏಷ್ಯಾದ ಇತರ ರಾಷ್ಟ್ರಗಳ ಕರೆನ್ಸಿಗಳಿಗೆ ಹೋಲಿಸಿದ್ರೆ ರೂಪಾಯಿ ಗುರುವಾರ ಹೆಚ್ಚಿನ ಆಘಾತ ಅನುಭವಿಸಿದೆ. 10 ವರ್ಷಗಳ ಅವಧಿಯ ಅಮೆರಿಕದ ಟ್ರೆಷರ್ ಯೀಲ್ಡ್ ಒಂದೇ ರಾತ್ರಿಯಲ್ಲಿ ಶೇ.3.70ಕ್ಕೆ ಏರಿಕೆ ಕಂಡಿದೆ. ಇನ್ನು ಎರಡು ವರ್ಷಗಳ ಯೀಲ್ಡ್ ಶೇ. 4.16ಕ್ಕೆ ಹೆಚ್ಚಳವಾಗಿದೆ. ಬಾಂಡ್ ಮಾರುಕಟ್ಟೆಯಲ್ಲಿನ ಇತ್ತೀಚೆಗೆ ಮಾರಾಟ ಹೆಚ್ಚುತ್ತಿದೆ. ಈ ವರ್ಷದ ಅಂತ್ಯದೊಳಗೆ ಯೀಲ್ಡ್ ದರ ಶೇ.4.4 ತಲುಪುವ ನಿರೀಕ್ಷೆಯಿದೆ. ಇನ್ನು 2022ರಲ್ಲಿ ಬಾಕಿಯಿರುವ ಫೆಡರಲ್ ರಿಸರ್ವ್ ಎರಡು ಸಭೆಗಳಲ್ಲಿ ಬಡ್ಡಿದರವನ್ನು 125 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡುವ ಸಾಧ್ಯತೆಯಿದೆ.
ಬೆಲೆ ಏರಿಕೆ ಸಾಧ್ಯತೆ?ಭಾರತದಲ್ಲಿ ಆಗಸ್ಟ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆಯಾಗಿದೆ. ಈಗಾಗಲೇ ಅಕ್ಕಿ, ತರಕಾರಿಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಹೀಗಿರುವಾಗ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಕಚ್ಚಾ ತೈಲ ಆಮದು ದುಬಾರಿಯಾಗಲಿದೆ. ಇದು ಮುಂದಿನ ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆಗೆ ಕಾರಣವಾಗಬಹುದು. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆ ಅಗತ್ಯ ವಸ್ತುಗಳ ಸಾಗಣೆ ವೆಚ್ಚ ಹೆಚ್ಚಿಸುವ ಕಾರಣ ಸಹಜವಾಗಿ ಅವುಗಳ ಬೆಲೆಯಲ್ಲಿ ಕೂಡ ಏರಿಕೆಯಾಗಲಿದೆ. ಇನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ ಉಪಕರಣಗಳು, ಚಿನ್ನ ಹಾಗೂ ಇತರ ವಸ್ತುಗಳ ಬೆಲೆಯಲ್ಲಿ ಕೂಡ ಏರಿಕೆಯಾಗಲಿದೆ. ಈಗಾಗಲೇ ಭಾರತದಲ್ಲಿ ಹಣದುಬ್ಬರ ಆರ್ ಬಿಐ ಸಹನ ಮಿತಿಯನ್ನು ಮೀರಿದೆ. ಹೀಗಿರುವಾಗ ಆಮದು ವೆಚ್ಚ ಹೆಚ್ಚಳ ಅಗತ್ಯ ವಸ್ತುಗಳ ಬೆಲೆಯಲ್ಲಿ ಇನ್ನಷ್ಟು ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಜೇಬಿನ ಮೇಲಿನ ಹೊರೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ.