

ಉಕ್ರೇನ್ ಮತ್ತು ರಷ್ಯಾ ಬಿಕ್ಕಟ್ಟು (Russia- Ukraine Crisis) ತಣ್ಣಗಾಗೆ ಹೆಚ್ಚುತ್ತಲೇ ಇದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಸೇರಿಕೊಳ್ಳುವಂತೆ ಮಿಲಿಟರಿ ಕರೆ ನೀಡಿದ ಬೆನ್ನಲ್ಲೆ ಯುದ್ಧದಿಂದ ತಪ್ಪಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಷ್ಯಾದಿಂದ ಪಲಾಯಾನ ಮಾಡುತ್ತಿರುವುದು ಕಂಡುಬಂದಿದೆ. ಅಧ್ಯಕ್ಷರ ಮಿಲಿಟರಿ ಕರೆಯ ಬೆನ್ನಲ್ಲೆ ರಷ್ಯಾ ಮತ್ತು ಜಾರ್ಜಿಯಾ ಗಡಿ ಭಾಗದಲ್ಲಿ ಯುದ್ಧದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಯುವಕರು ವಾಹನಗಳ ಮೂಲಕ ಗಡಿ ಭಾಗಕ್ಕೆ ತೆರಳುತ್ತಿದ್ದು, ಮೈಲುಗಳಷ್ಟು ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿವೆ. ಅಪ್ಪರ್ ಲಾರ್ಸ್ ಚೆಕ್ಪಾಯಿಂಟ್ನಲ್ಲಿ ಸುಮಾರು 5 ಕಿ.ಮೀ ಉದ್ದಗಳಷ್ಟು ಕಾರುಗಳು ಸಾಲುಗಟ್ಟಿ ನಿಂತಿವೆ. ಅಧ್ಯಕ್ಷ ಪುಟಿನ್ ಅವರು ಘೋಷಣೆ ಮಾಡಿದ ತಕ್ಷಣ ಪಾಸ್ಪೋರ್ಟ್ ಹಿಡಿದುಕೊಂಡು ಗಡಿಯತ್ತ ಹೊರಟಿರುವುದಾಗಿ ವ್ಯಕ್ತಿಯೊಬ್ಬರು ಬಿಬಿಸಿಗೆ ಹೇಳಿದ್ದಾರೆ. ಗುಂಪೊಂದು ಗಡಿಯನ್ನು ದಾಟಲು 7 ಗಂಟೆಗಳನ್ನು ತೆಗೆದುಕೊಂಡಿದೆ ಎಂದು ಹೇಳಿದೆ. ವಾಹನ ದಟ್ಟಣೆ ಹೆಚ್ಚಾದ ಹಿನ್ನೆಲೆ ಕೆಲವರು ತಮ್ಮ ವಾಹನಗಳನ್ನು ಬಿಟ್ಟು ಹೋಗುತ್ತಿದ್ದಾರೆ.
ಗಗನಕ್ಕೇರಿದ ವಿಮಾನ ಟಿಕೆಟ್ ಬೆಲೆ
ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಗಡಿ ತೊರೆಯುತ್ತಿರುವ ನಡುವೆ ವಿಮಾನದ ಮೂಲಕ ತಲುಪಬಹುದಾದ ಇಸ್ತಾನ್ಬುಲ್, ಬೆಲ್ಗ್ರೇಡ್ ಅಥವಾ ದುಬೈನಲ್ಲಿ ವಿಮಾನದ ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆ. ಏಕಮುಖ ಟಿಕೆಎಟ್ ಮಾರಾಟದಲ್ಲಿ ದೊಡ್ಡ ಏರಿಕೆಯನ್ನು ಮಾಡಲಾಗಿದೆ ಎಂದು ಟರ್ಕಿಯ ಮಾಧ್ಯಮವು ವರದಿ ಮಾಡಿದೆ. ವೀಸಾ ಅಲ್ಲದ ಸ್ಥಳಗಳಿಗೆ ಉಳಿದಿರುವ ವಿಮಾನಗಳಲ್ಲಿ ಪ್ರಯಾಣಿಸಬೇಕಾದರೆ ಜನರು ಸಾವಿರಾರು ಯುರೋಗಳನ್ನು ನೀಡಬೇಕಾಗುತ್ತದೆ. ಇನ್ನೊಂದೆಡೆ ಯುದ್ಧದಿಂದ ತಪ್ಪಿಸಿಕೊಳ್ಳಲು ಬಯಸುತ್ತಿರುವ ರಷ್ಯನ್ನರನ್ನು ತಮ್ಮ ದೇಶ ಸ್ವಾಗತಿಸುತ್ತದೆ ಎಂದು ಜರ್ಮನಿ ಹೇಳಿಕೊಂಡಿದೆ. ಆದರೆ ಲಿಥುವೇನಿಯಾ, ಲಾಟ್ವಿಯಾ, ಎಸ್ಟೋನಿಯಾ ಮತ್ತು ಜೆಕ್ ರಿಪಬ್ಲಿಕ್ ಪಲಾಯನ ಮಾಡುವ ರಷ್ಯನ್ನರಿಗೆ ಆಶ್ರಯ ನೀಡುವುದಿಲ್ಲ ಎಂದು ಹೇಳಿದೆ.

ಡ್ರಾಫ್ಟ್ ಅನ್ನು ತಪ್ಪಿಸಿಕೊಳ್ಳುವುದು ರಷ್ಯಾದಲ್ಲಿ ಕ್ರಿಮಿನಲ್ ಅಪರಾಧ
ಯುದ್ಧಕ್ಕೆ ಯುವಕರು ಸೇರುವಂತೆ ಕರೆ ನೀಡಿದ ಬೆನ್ನಲ್ಲೆ ಮಿಲಿಟರಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಿಲಿಟರಿ ಸೇವೆಯನ್ನು ಮಾಡಿದ ಮತ್ತು ವಿಶೇಷ ಕೌಶಲ್ಯ ಹಾಗೂ ಯುದ್ಧ ಅನುಭವವನ್ನು ಹೊಂದಿರುವ ಜನರನ್ನು ಮಾತ್ರ ಕರೆಯಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಪಿಎಚ್‌ಡಿ ವಿದ್ಯಾರ್ಥಿ ಮತ್ತು ರಷ್ಯಾದ ಪ್ರಮುಖ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರೊಬ್ಬರ ಬಳಿಯಿಂದ ಮಿಲಿಟರಿಗೆ ಪೇಪರ್ಗೆ ಸಹಿ ಹಾಕಿಸಿಕೊಳ್ಳಲಾಗಿದೆ. ಗುರುವಾರ ಕರಡು ಕೇಂದ್ರಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದರೆ ಈ ಉಪನ್ಯಾಸಕರಿಗೆ ಯಾವುದೇ ಮಿಲಿಟರಿ ಅನುಭವ ಇಲ್ಲ. ಇದು ಅವರ ಮಲತಂದೆಯನ್ನು ಚಿಂತೆಗೀಡು ಮಾಡಿದೆ ಎಂದು ಬಿಬಿಸಿ ವರದಿ ಮಾಡಿದೆ.
ಯುದ್ಧದಿಂದ ತಪ್ಪಿಸಲು ಅಂಗಾಂಗ ಮುರಿಯಲು ಮುಂದಾಗುತ್ತಿರುವ ಯುವಕ
ಯುದ್ಧದಿಂದ ತಪ್ಪಿಸಿಕೊಳ್ಳಲು ಯುವಕರು ಬೇರೆಬೇರೆ ಕಾರಣಗಳನ್ನು ಹುಡುಕುತ್ತಿದ್ದಾರೆ. “ವಾಹನ ಚಲಾಯಿಸುತ್ತಾ ಕಲ್ಲು ಎಸೆದು ಬಂಧಿಸಲ್ಪಟ್ಟರೆ ಪರವಾನಗಿ ರದ್ದುಗೊಳಿಸಲಾಗತ್ತದೆ. ಸೇನೆ ತೆಗೆದುಕೊಳ್ಳುವುದನ್ನು ತಪ್ಪಿಸಲು ಇದು ಸಾಕಾಗುತ್ತದೆ” ಎಂದು ಒಂದಷ್ಟು ಮಂದಿ ಯೋಚಿಸುತ್ತಿದ್ದಾರೆ. ಆದರೆ ಕಲಿನಿನ್‌ಗ್ರಾಡ್‌ನ ವ್ಯಕ್ತಿಯೊಬ್ಬ ಯುದ್ಧದಿಂದ ತಪ್ಪಿಸಿಕೊಳ್ಳಲು “ತನ್ನ ಕೈ, ಕಾಲು ಮುರಿದುಕೊಳ್ಳುತ್ತೇನೆ, ನಾನು ಜೈಲಿಗೆ ಹೋಗಲು ಬಯಸುತ್ತೇನೆ, ಯುದ್ಧದಿಂದ ತಪ್ಪಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತೇನೆ” ಎಂದು ಬಿವಿಸಿಗೆ ಹೇಳಿದ್ದಾನೆ.